ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ‘ಕಾಂಗ್ರೆಸ್‌ನವರಿಗೆ ಕಾನೂನಿನ ಮೇಲೆ ಗೌರವ ಇಲ್ಲ. ಅಧಿಕಾರಿಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಸಹ ಅದೇ ರೀತಿ ವರ್ತಿಸುತ್ತಿದ್ದಾರೆ’ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯವನ್ನು ಮತಾಂಧ ಕೇಂದ್ರವನ್ನಾಗಿ ಮಾಡಲಾಗುತ್ತದೆ. ಇದು ಒಂದು ವರ್ಗ, ಮತಾಂಧರ ಪರವಾಗಿ ಇರುವ ಸರ್ಕಾರ‘ ಎಂದು ಆರೋಪಿಸಿದರು.
‘ವಿದೇಶಿ ವ್ಯಾಸಂಗಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳಿಗೆ ₹30 ಲಕ್ಷ ಬಡ್ಡಿ ರಹಿತ ಸಾಲ, ವಕ್ಫ್ ಆಸ್ತಿ ರಕ್ಷಣೆಗೆ ₹150 ಕೋಟಿ, ಮುಸ್ಲಿಮರ ಅಭಿವೃದ್ಧಿಗೆ ₹4 ಸಾವಿರ ಕೋಟಿ, ಅಲ್ಪಸಂಖ್ಯಾರ ಕಾಲೊನಿ ಅಭಿವೃದ್ಧಿಗೆ ₹1 ಸಾವಿರ ಕೋಟಿಯನ್ನು ಸರ್ಕಾರ ನೀಡುತ್ತಿದೆ. ಇವೆಲ್ಲವೂ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಉದಾಹರಣೆ‘ ಎಂದು ಹೇಳಿದರು.
‘2019ರ ಅಧಿಸೂಚನೆಯಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ, ಚಾಲಕ ಕಂ ನಿರ್ವಾಹಕ ಸೇರಿ 2814 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಆದರೆ ಒಂದು ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿರುವುದು ತಪ್ಪು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕರೆ ಮಾಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ’ ಎಂದರು.
‘ಒಳಮೀಸಲಾತಿ ಜಾರಿಯಾದರೆ ನೇಮಕಾತಿ ಮತ್ತಷ್ಟು ವಿಳಂಬವಾಗುತ್ತದೆ ಎಂಬುದು ಅಭ್ಯರ್ಥಿಗಳ ಆತಂಕ. ಹೀಗಾಗಿ ನಿರ್ವಾಹಕ ಪರವಾನಗಿ ಇಲ್ಲದ ಅಭ್ಯರ್ಥಿಗಳಿಗೆ ಪರವಾನಗಿ ಮಾಡಿಸಿಕೊಳ್ಳಲು ಕಾಲಾವಕಾಶ ನೀಡಿ, ನೇಮಕಾತಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು‘ ಎಂದು ಹೇಳಿದರು.
ಮನವಿ ಸಲ್ಲಿಕೆ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೇಮಕಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಅಭ್ಯರ್ಥಿಗಳು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಭಾನುವಾರ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.