ADVERTISEMENT

ಮಾವಿನ ಸಂಭ್ರಮ ಕಸಿದ ಅಕಾಲಿಕ ಮಳೆ

ಇಳುವರಿಯಲ್ಲಿ ಕುಸಿತ; ಸಂಕಷ್ಟದಲ್ಲಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 22 ಮೇ 2022, 7:41 IST
Last Updated 22 ಮೇ 2022, 7:41 IST
ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿ ಮಾವಿನ ಹಣ್ಣು ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿ ರವಿ ಹಂಜಗಿ
ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿ ಮಾವಿನ ಹಣ್ಣು ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿ ರವಿ ಹಂಜಗಿ   

ಹುಬ್ಬಳ್ಳಿ: ಭಾರಿ ಗಾಳಿ ಸಹಿತಅಕಾಲಿಕ ಮಳೆಗೆ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಇಳುವರಿ ಗಣನೀಯವಾಗಿ ಕುಸಿದಿದೆ. ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಇರುತ್ತಿದ್ದ ಮಾವು ಖರೀದಿಯ ಸಂಭ್ರಮವನ್ನು ಈ ಬಾರಿಯ ಮಳೆಯು ಕಿತ್ತುಕೊಂಡಿದೆ.

ವರ್ಷಾಂತ್ಯದಲ್ಲಿ ಸುರಿದ ಮಳೆಯಿಂದಾಗಿ ಮಾವಿನ ಮರದಲ್ಲಿ ಹೂವು ಕಟ್ಟುವುದೇ ಸಮಸ್ಯೆಯಾಗಿತ್ತು. ನಂತರದ ಬಿರು ಬಿಸಿಲಿನಿಂದಾಗಿ ಸಕಾಲದಲ್ಲಿ ಕಾಯಿಗಳು ಬಿಡದಿದ್ದರಿಂದ, ಆರಂಭದಲ್ಲೇ ರೈತರಿಗೆ ಆಘಾತ ಮೂಡಿಸಿತ್ತು. ಆದರೂ, ಅಲ್ಪಸ್ವಲ್ಪ ಮಾವು ಕೈಸೇರುವ ಹೊತ್ತಿನಲ್ಲಿ ಮತ್ತೆ ಗಾಳಿಯೊಂದಿಗೆ ಸುರಿದ ಮಳೆಯು ಬೆಳೆಗಾರರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದೆ.

ಎಲ್ಲೆಲ್ಲಿ ಬೆಳೆ: ಧಾರವಾಡದಲ್ಲಿ ಆಲ್ಫಾನ್ಸೊಹಾಗೂ ಕಲ್ಮಿ ಮಾವು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಧಾರವಾಡ, ಕಲಘಟಗಿ, ಅಳ್ನಾವರದಲ್ಲಿ ಪ್ರಮುಖವಾಗಿ ಹಾಗೂ ಹುಬ್ಬಳ್ಳಿ ಮತ್ತು ಕುಂದಗೋಳದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾವು ಬೆಳೆಯುವವರಿದ್ದಾರೆ. ಸ್ಥಳೀಯ ಮಾವುಗಳ ಜೊತೆಗೆ, ಬೇನಿಸ್ ಮತ್ತು ಈಶಾಡ್ ಮಾವು ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ, ಅಕಾಲಿಕ ಮಳೆಯಿ ಆಘಾತ ರೈತರನ್ನು ಚಿಂತೆಗೀಡುಮಾಡಿದೆ. ಮಾವು ಮಾರಾಟಗಾರರು ನಷ್ಟ ಅನುಭವಿಸುವಂತಾಗಿದೆ.

ADVERTISEMENT

‘ಅಕಾಲಿಕ ಮಳೆಯು ಮಾವು ಬೆಳೆಯ ಮೇಲೆ ನೇರ ಪರಿಣಾಮ ಬೀರಿದೆ. ಹೂವು ಬಿಡುವುದು ಒಂದೂವರೆ ತಿಂಗಳವರೆಗೆ ತಡವಾಗಿತ್ತು. ಹೂ ಬಿಟ್ಟಾಗ ಮಣ್ಣಿನಲ್ಲಿ ತೇವಾಂಶ ಸೃಷ್ಟಿಯಾಗಿದ್ದು ಹಾಗೂ ಬಿಸಿಲಿನತಾಪಮಾನ ಹೆಚ್ಚಾಯಿತು. ಇದರಿಂದಾಗಿ ಮೂಲ ಹಂತದಲ್ಲೇ ಶೇ 25ರಷ್ಟು ಮಾವು ಬೆಳೆ ನಷ್ಟವಾಗಿದೆ’ ಎಂದುತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಕಾಶಿನಾಥ ಭದ್ರಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘2021ರಲ್ಲಿ ಮುಂಗಾರು ಅಕ್ಟೋಬರ್‌ವರೆಗೂ ವಿಸ್ತರಣೆಯಾಗಿದ್ದರಿಂದ, ಹೂವು ಕಟ್ಟುವ ಅವಧಿಯೂ ಮುಂದಕ್ಕೆ ಹೋಗಿತ್ತು. ಮುಂದೆ ಕಾಯಿ ಕಟ್ಟುವ ಹಂತದಲ್ಲಿ ವಾತಾವರಣದಲ್ಲಿ ತಾಪಮಾನ ಅಧಿಕವಾಗಿದ್ದರಿಂದ ಕಾಯಿ ನಿಲ್ಲಲಿಲ್ಲ. ಜಿಲ್ಲೆಯ 8 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಒಂದು ಹೆಕ್ಟೇರ್‌ನಲ್ಲಿ ಸುಮಾರು 6 ಟನ್‌ ಇಳುವರಿಬರುತ್ತಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಒಂದು ಅಥವಾ ಒಂದೂವರೆ ಟನ್‌ ಮಾತ್ರ ಇಳುವರಿ ಬರುವ ಸಾಧ್ಯತೆ ಇದೆ. ಹೀಗಾಗಿ, ರೈತರಿಗೆ ಇಳುವರಿ ಕುಸಿತದ ಆತಂಕ ಹೆಚ್ಚಾಗಿದೆ’ ಎಂದರು.

ಕೈ ಕೊಟ್ಟ ಬೆಳೆ: ‘ನಾಲ್ಕು ಎಕರೆಯಲ್ಲಿ ಮಾವು ಬೆಳೆದಿದ್ದೆ. ಸಕಾಲದಲ್ಲಿ ಹೂ ಬಿಡದೆ ಅರ್ಧದಷ್ಟು ಬೆಳೆ ನಷ್ಟವಾದರೆ, ಇನ್ನುಳಿದ ಬೆಳೆ ಅಕಾಲಿಕ ಮಳೆಗೆ ತುತ್ತಾಗಿದೆ. ಸರ್ಕಾರ ಮಾವು ಮಾರಾಟಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದರೆ ಅನುಕೂಲವಾಗಲಿದೆ. ಇದರಿಂದ ಬೆಳೆಗಾರರು ಸಾಲದಿಂದ ತಪ್ಪಿಸಿಕೊಳ್ಳಬಹುದು’ ಎಂದು ಕುಂದಗೋಳದ ರೈತ ಗಣಪತಿ ಹಿತ್ತಲಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.