ADVERTISEMENT

ಕುಂದಗೋಳ ಉಪಚುನಾವಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 8:55 IST
Last Updated 16 ಏಪ್ರಿಲ್ 2019, 8:55 IST

ಧಾರವಾಡ: ‘ಸಚಿವ ಸಿ.ಎಸ್‌.ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಕುಂದಗೋಳ ವಿಧಾನಸಭಾ ಕ್ಷೇತ್ರ ಸದಸ್ಯ ಸ್ಥಾನಕ್ಕೆ ಮೇ. 19ರಂದು ಮತದಾನ ನಡೆಯಲಿದ್ದು, ಇದಕ್ಕೆ ಏ. 22ರಂದು ಅಧಿಸೂಚನೆ ಘೋಷಣೆಯಾಗಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

‘ಚುನಾವಣಾ ಆಯೋಗವು ಏ. 9ರಂದು ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಿತ್ತು. ಏ. 29ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಏ. 30ರಂದು, ನಾಮಪತ್ರ ವಾಪಾಸ್ ಪಡೆಯಲು ಮೇ 2ರಂದು ಕೊನೆಯ ದಿನವಾಗಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆ ದಿನವಾದ ಮೇ 23ರಂದೇ ಈ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರತ್ಯೇಕ ಮಾದರಿ ನೀತಿ ಸಂಹಿತೆ ಇರುವುದಿಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕುಂದಗೋಳ ವಿಧಾನಸಭಾಕ್ಷೇತ್ರದಲ್ಲಿ ಒಟ್ಟು 214 ಮತಗಟ್ಟೆಗಳಿವೆ. ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 18 ಸೆಕ್ಟರ್ ಅಧಿಕಾರಿಗಳು, 6 ಸ್ಥಾನಿಕ ಕಣ್ಗಾವಲುತಂಡ, ಒಂದು ವೀಡಿಯೋ ವೀಕ್ಷಣಾ ತಂಡ, 3 ವೀಡಿಯೋ ಕಣ್ಗಾವಲು ತಂಡ, 6 ಸಂಚಾರಿ ವಿಚಕ್ಷಣಾ ದಳ, ಚುನಾವಣಾ ವೆಚ್ಚ ತಂಡ 4ಗಳನ್ನು ನಿಯೋಜಿಸಲಾಗಿದೆ. ಎಲ್ಲ ನೋಡಲ್ ಅಧಿಕಾರಿಗಳು ಉಪ ಚುನಾವಣಾ ಕರ್ತವ್ಯವನ್ನು ನಿರ್ವಹಿಸುವಂತೆ ನಿರ್ದೇಶನಗಳನ್ನೂ ನೀಡಲಾಗಿದೆ’ ಎಂದರು.

ADVERTISEMENT

‘ಈ ಉಪಚುನಾವಣೆಯ ಮತದಾನಕ್ಕೆ ಮತ ಚಲಾಯಿಸಲು ಮತದಾರರ ಗುರುತಿನ ಚೀಟಿ ಪ್ರಮುಖ ದಾಖಲೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತದಾರರ ಗುರುತಿಗೆ ಚುನಾವಣಾ ಆಯೋಗ ನಿಗದಿಪಡಿಸಿದ ಪರ್ಯಾಯ ದಾಖಲೆಗಳು ಅಗತ್ಯ. ಕುಂದಗೋಳ ಕ್ಷೇತ್ರಕ್ಕೆ ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಏ. 19ರವರೆಗೆ ಕಾಲಾವಕಾಶ ಇದೆ’ ಎಂದು ಮಾಹಿತಿ ನೀಡಿದರು.

‘ಕ್ಷೇತ್ರದಲ್ಲಿ ಒಟ್ಟು 1,89,2181 ಮತದಾರರು ಇದ್ದಾರೆ. ಇವರಲ್ಲಿ 256 ಪುರುಷ ಮತ್ತು 3 ಮಹಿಳಾ ಮತದಾರರು ಸೇರಿದಂತೆ ಒಟ್ಟು 259 ಸೇವಾ ಮತದಾರರು ಇದ್ದಾರೆ. ಮತದಾನಕ್ಕೆ ಅಗತ್ಯ ಇರುವ ಮತಗಟ್ಟೆ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಪಚುನಾವಣೆ ಅಗತ್ಯವಿರುವ 321 ಬ್ಯಾಲೆಟ್ ಯುನಿಟ್, 278 ಕಂಟ್ರೋಲಿಂಗ್ ಯೂನಿಟ್ ಮತ್ತು 278 ವಿವಿ ಪ್ಯಾಟ್‌ ವಿದ್ಯುನ್ಮಾನ ಮತಯಂತ್ರಗಳಿಗೆ ಬೇಡಿಕೆಯ ಪ್ರಸ್ತಾವನೆಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ’ ಎಂದು ದೀಪಾ ಚೋಳನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.