ADVERTISEMENT

ಎಪಿಎಂಸಿಗೆ ಭೇಟಿ: ಸಚಿವರ ಎದುರು ಸಮಸ್ಯೆಗಳ ಸರಮಾಲೆ

ಈರುಳ್ಳಿ ಬೆಳೆಗಾರರ ಜೊತೆ ಬಂಡೆಪ್ಪ‌ ಕಾಶೆಂಪುರ‌ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 12:16 IST
Last Updated 17 ಡಿಸೆಂಬರ್ 2018, 12:16 IST
ಸಹಕಾರ ಸಚಿವ ಬಂಡೆಪ್ಪ‌ ಕಾಶೆಂಪುರ‌ ಸೋಮವಾರ ಅಮರಗೋಳದಲ್ಲಿರುವ ಎಪಿಎಂಸಿಗೆ ಭೇಟಿ ನೀಡಿ ಈರುಳ್ಳಿ ಪರಿಶೀಲಿಸಿದರು
ಸಹಕಾರ ಸಚಿವ ಬಂಡೆಪ್ಪ‌ ಕಾಶೆಂಪುರ‌ ಸೋಮವಾರ ಅಮರಗೋಳದಲ್ಲಿರುವ ಎಪಿಎಂಸಿಗೆ ಭೇಟಿ ನೀಡಿ ಈರುಳ್ಳಿ ಪರಿಶೀಲಿಸಿದರು   

ಹುಬ್ಬಳ್ಳಿ: ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವಿಸ್ತೀರ್ಣದಲ್ಲಿ ಮಾತ್ರ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡದು. ಆದರೆ, ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿದೆ ಎಂದು ಸಹಕಾರ ಸಚಿವ ಬಂಡೆಪ್ಪ‌ ಕಾಶೆಂಪುರ‌ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸೋಮವಾರ ಎಪಿಎಂಸಿಗೆ ಭೇಟಿ ನೀಡಿದ ಅವರು ರೈತರು, ಈರುಳ್ಳಿ ಬೆಳೆಗಾರರು, ವರ್ತಕರು, ಹಮಾಲಿಗಳ ಜೊತೆ ಚರ್ಚಿಸಿದರು. ಆಗ ಸಚಿವರಿಗೆ ಸಮಸ್ಯೆಗಳು ಅನಾವರಣವಾದವು.

434 ಎಕರೆ ವಿಸ್ತೀರ್ಣದ ಎಪಿಎಂಸಿ ಕೇಂದ್ರಕ್ಕೆ 28 ಜನ ಮಾತ್ರ ಭದ್ರತಾ ಸಿಬ್ಬಂದಿ ಇದ್ದಾರೆ. ಇಲ್ಲಿ ಕಳ್ಳತನದ ಪ್ರಕರಣ ಹೆಚ್ಚಾಗುತ್ತಿವೆ. ಆದ್ದರಿಂದ ಮೊದಲು ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ವ್ಯಾಪಾರಸ್ಥರು, ಹಮಾಲಿಗಳು ಒಕ್ಕೊರಲಿನಿಂದ ಆಗ್ರಹಿಸಿದರು. 2008ರಿಂದ ಮಹಾನಗರ ಪಾಲಿಕೆಗೆ ತೆರಿಗೆ ತುಂಬುತ್ತಿದ್ದೇವೆ. ಆದರೆ, ಪಾಲಿಕೆ ಸಿಬ್ಬಂದಿ ಇಲ್ಲಿ ಶುಚಿಗೊಳಿಸುವ ಕೆಲಸ ಮಾಡುವುದಿಲ್ಲ. ತೆರಿಗೆ ತುಂಬಿದರೂ ಪಾಲಿಕೆಯಿಂದ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.

ADVERTISEMENT

ದೂರದ ಊರುಗಳಿಂದ ಕಾಯಿಪಲ್ಲೆ ಮತ್ತು ತರಕಾರಿ ಮಾರಾಟ ಮಾಡಲು ಇಲ್ಲಿಗೆ ಬರುವ ರೈತರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲ. ಆದ್ದರಿಂದ ರೈತಭವನ ಸರಿಯಾಗಿ ಬಳಕೆಯಾಗಬೇಕು. ಜಿಲ್ಲೆಯ ಸುತ್ತಮುತ್ತಲಿನ ಊರುಗಳಿಂದ ಬರುವ ರೈತರಿಗೆ ಸುಲಭವಾಗಿ ಎಪಿಎಂಸಿ ಪ್ರವೇಶಿಸಲು ಇನ್ನೊಂದು ಗೇಟ್‌ ಅಗತ್ಯವಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗೋದಾಮುಗಳನ್ನು ನಿರ್ಮಿಸಬೇಕು ಎಂದು ಅಗ್ರಹಿಸಿದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ‘ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅನುಕೂಲವಾಗಿದ್ದ ರೈತರ ಸಂತೆ ನಿಂತು ಹೋಗಿದೆ. ದಲ್ಲಾಳಿಗಳ ಕಮಿಷನ್‌ ಹಾವಳಿ ಹೆಚ್ಚಾಗಿದೆ’ ಎಂದರು.

ಕೊನೆಯಲ್ಲಿ ಮಾತನಾಡಿದ ಸಚಿವರು ‘ಹಿಂದೆ ನಾನು ಕೃಷಿ ಮಂತ್ರಿಯಾಗಿದ್ದಾಗ ಪ್ರತಿ ಐದು ಕಿ.ಮೀ.ಗೆ ಒಂದು ಗೋದಾಮು ನಿರ್ಮಿಸಬೇಕು ಎಂದು ಆದೇಶಿಸಿದ್ದೆ. ಆದರೆ, ಅದು ಎಲ್ಲ ಕಡೆ ಕಾರ್ಯಗತಕ್ಕೆ ಬಂದಿಲ್ಲ. ಈಗಿನ ಸರ್ಕಾರ ರೈತರ ಪರವಾಗಿದೆ. ಅವರಿಗೆ ಎಲ್ಲ ಅಗತ್ಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಉತ್ತಮ ಅನುದಾನ ನೀಡಿ ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಇಲ್ಲಿನ ಎಪಿಎಂಸಿ ಕೇಂದ್ರದ ಅಭಿವೃದ್ಧಿಗೆ ಯಾರೂ ನೆರವು ಕೇಳಿಲ್ಲ’ ಎಂದರು.

‘ರೈತರ ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಲಭಿಸಲು ಅಲ್ಲಲ್ಲಿ ಕೋಲ್ಡ್‌ಸ್ಟೋರೇಜ್ ನಿರ್ಮಾಣ ಮಾಡುವ ಅಗತ್ಯವಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 50 ಕಡೆ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಲಾಗುವುದು. ರೈತರು ತಮ್ಮ ಬೆಳೆಗಳಿಗೆ ಬ್ರ್ಯಾಂಡ್‌ ಸೃಷ್ಟಿಮಾಡಬೇಕು. ಇದರಿಂದ ಉತ್ತಮ ಬೆಲೆ ಲಭಿಸುತ್ತದೆ’ ಎಂದು ಹೇಳಿದರು.

ಈರುಳ್ಳಿಗೆ ಪ್ರೋತ್ಸಾಹ ಧನ ಪಡೆದುಕೊಳ್ಳುವ ಸಲುವಾಗಿ ಹೆಸರು ನೋಂದಾಯಿಸಲು ಬಂದಿದ್ದ ರೈತರ ಜೊತೆ ಸಚಿವರು ಚರ್ಚಿಸಿದರು. ಮಾರುಕಟ್ಟೆಯಲ್ಲಿನ ವಿವಿಧ ಗುಣಮಟ್ಟದ ಈರುಳ್ಳಿ ಪರಿಶೀಲಿಸಿದರು.

ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನನೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.