ADVERTISEMENT

ವೃತ್ತಿಪರತೆ, ಬದ್ಧತೆ ಯಶಸ್ಸಿನ ಗುಟ್ಟು: ವೀರೇಂದ್ರ ಹೆಗ್ಗಡೆ

ಚೇತನ ಗ್ರೂಪ್‌ ಇನ್‌ಸ್ಟಿಟ್ಯೂಟ್‌ನ 11ನೇ ಸಂಸ್ಥಾಪನಾ ದಿನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 4:58 IST
Last Updated 25 ಫೆಬ್ರುವರಿ 2022, 4:58 IST
ಹುಬ್ಬಳ್ಳಿಯಲ್ಲಿ ಗುರುವಾರ ಹಿರಿಯ ನೇತ್ರತಜ್ಞ ಡಾ. ಎಂ.ಎಂ. ಜೋಶಿ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ‘ಚೇತನಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು
ಹುಬ್ಬಳ್ಳಿಯಲ್ಲಿ ಗುರುವಾರ ಹಿರಿಯ ನೇತ್ರತಜ್ಞ ಡಾ. ಎಂ.ಎಂ. ಜೋಶಿ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ‘ಚೇತನಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು   

ಹುಬ್ಬಳ್ಳಿ: ಯಾವುದೇ ಕೆಲಸವಾದರೂ ಸಂಪೂರ್ಣವಾಗಿ ತೊಡಗಿಕೊಂಡು ಬದ್ಧತೆಯಿಂದ ಮಾಡಿದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ವೃತ್ತಿಪರತೆ ಜೊತೆಗೆ ಕಾರ್ಯತತ್ಪರತೆ ರೂಢಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

ಡಿ.ಕೆ. ಸಿದ್ನಾಳ ಎಜುಕೇಷನ್‌ ಟ್ರಸ್ಟ್‌ನ ಚೇತನ ಸಮೂಹ ಸಂಸ್ಥೆಗಳ 11ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಉನ್ನತಿಗೇರುವ ಅವಕಾಶಕ್ಕಾಗಿ ಕಾದು ಕೂಡದೆ ಸಿಕ್ಕ ಕೆಲಸವನ್ನು ಪರಿಪೂರ್ಣವಾಗಿ ಮಾಡಬೇಕು. ಯಾವುದೇ ಸಂಸ್ಥೆ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲು ಇಷ್ಟಪಡುತ್ತದೆ. ಅದಕ್ಕೆ ತಕ್ಕಷ್ಟು ವೇತನ ಕೂಡ ಕೊಡುತ್ತದೆ. ಕೊಟ್ಟ ಕೆಲಸವನ್ನು ಸಮರ್ಥವಾಗಿ ಮಾಡಿದರೆ ಹೊಸ ಅವಕಾಶಗಳು, ಸ್ಥಾನಮಾನ ಹುಡುಕಿಕೊಂಡು ಬರುತ್ತದೆ’ ಎಂದರು.

‘ಎಂ.ಸಿ. ಮೋದಿ ಅವರಂತೆ ಎಂ.ಎಂ. ಜೋಶಿ ಅವರು ತಮ್ಮ ವೈದ್ಯ ವೃತ್ತಿಯ ಕಾಯಕದ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ವೃತ್ತಿಯನ್ನು ನಿಷ್ಠೆಯಿಂದ ಮಾಡಿ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

’ಜಗತ್ತಿನಲ್ಲಿ ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ; ಅದನ್ನು ಒಪ್ಪಿಕೊಳ್ಳಬೇಕು. ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು. ಕೆಲಸ ಮಾಡುವಾಗ ಸುಖಕ್ಕಾಗಿ ಹಂಬಲಿಸುವುದಕ್ಕಿಂತ ತ್ಯಾಗಕ್ಕೆ ಆದ್ಯತೆ ಕೊಡಬೇಕು. ಆಗ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಹಿರಿಯ ನೇತ್ರತಜ್ಞ ಡಾ. ಎಂ.ಎಂ. ಜೋಶಿ ಅವರಿಗೆ ‘ಚೇತನಶ್ರೀ’ ಪ್ರಶಸ್ತಿಯನ್ನು ವೀರೇಂದ್ರ ಹೆಗ್ಗಡೆ ಅವರು ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಜೋಶಿ ಅವರು ‘ಹೆಗ್ಗಡೆ ಅವರು ತಮ್ಮ ಕಾರ್ಯತತ್ಪರತೆ ಮೂಲಕ ಧರ್ಮಸ್ಥಳವನ್ನು ಯಾತ್ರಾ ಸ್ಥಳವಾಗಿ ಬದಲಾಯಿಸಿದ್ದಾರೆ. ಸಮಾಜದ ಕುಂದುಕೊರತೆ ಸರಿಪಡಿಸಿದ್ದಾರೆ. ಅತಿಥಿ ದೇವೋಭವ, ಗುರುದೇವೋಭವ ಎನ್ನುವ ರೀತಿಯಲ್ಲಿಯೇ ಸಮಾಜ ದೇವೊಭವ ಎನ್ನುವುದನ್ನು ಕಲಿತುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಚೇತನ ಬಿಸಿನೆಸ್‌ ಶಾಲೆಯ ಶೈಕ್ಷಣಿಕ ನಿರ್ದೇಶಕ ಡಾ. ರಮಾಕಾಂತ ಕುಲಕರ್ಣಿ, ಎಂ.ಎಂ. ಜೋಶಿ ಅವರ ಪತ್ನಿ ಪ್ರಮೀಳಾ ಜೋಶಿ, ಕಾಲೇಜಿನ ವಾಣಿಜ್ಯ ಮತ್ತು ಬಿಸಿಎ ವಿಭಾಗದ ಪ್ರಾಚಾರ್ಯ ಡಾ. ಅಶೋಕ ಆರ್‌. ವಡಕಣ್ಣನವರ, ಡಿಕೆಎಸ್‌ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಮುರುಗೇಶ ಎಸ್‌. ಸಿದ್ನಾಳ, ಚೇರ್ಮನ್‌ ಜಗದೀಶ ಎಚ್‌. ದ್ಯಾವಪ್ಪನವರ, ನಿರ್ದೇಶಕ ಡಾ. ವಿ.ಎಂ. ಕೊರವಿ, ರಾಜಣ್ಣ ಕೊರವಿ, ಡಾ. ಪವನ ಅಪರಂಜಿ, ಪ್ರೊ. ಕೌಜಲಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.