ಧಾರವಾಡ: ‘ದುಶ್ಚಟಗಳನ್ನು ರೂಢಿಸಿಕೊಳ್ಳಬೇಕು. ವ್ಯಸನ ಮುಕ್ತರಾಗಿರುವುದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್ ದೊಡ್ಡಮನಿ ಹೇಳಿದರು.
ಇಲಕಲ್ಲ ಮಹಾಂತ ಅಪ್ಪಗಳ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಹಾಗೂ ಕೇಂದ್ರ ಕಾರಾಗೃಹದ ವತಿಯಿಂದ ಕಾರಾಗೃಹದ ಗಾಂಧೀ ಭವನದಲ್ಲಿ ಬುಧವಾರ ನಡೆದ ವ್ಯಸನಮುಕ್ತ ದಿನಾಚರಣೆಯಲ್ಲಿ ಮಾತನಾಡಿದರು. ‘ಉತ್ತಮ ಅಭ್ಯಾಸಗಳು ಬದುಕನ್ನು ಸುಂದರವಾಗಿಸುತ್ತವೆ. ಸಾಮಾಜಿಕವಾಗಿ, ಕೌಟುಂಬಿಕವಾಗಿ ನೆಮ್ಮದಿಯಿಂದ ಇರಬಹುದು’ ಎಂದರು.
‘ವ್ಯಸನಗಳು ಮನಸ್ಸು, ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ವ್ಯಸನ ತ್ಯಜಿಸಿದ ನಂತರ ಮತ್ತೆ ಅದರ ಬಗ್ಗೆ ಯೋಚಿಸಬಾರದು. ವ್ಯಸನಿಗಳ ಸಹವಾಸದಿಂದ ದೂರ ಇರಬೇಕು. ಒಳ್ಳೆಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದರು.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ನಿಮ್ಮಲ್ಲಿ ಅನೇಕರು ಇಲ್ಲಿರಲು ವ್ಯಸನವೇ ಪರೋಕ್ಷವಾಗಿ ಅಥವಾ ನೇರವಾಗಿ ಕಾರಣವಾಗಿರಬಹುದು. ಒಂದು ಕ್ಷಣದ ತಪ್ಪು ನಿರ್ಧಾರ, ಒತ್ತಡದಿಂದಾಗಿ ಶುರುವಾಗುವ ದುಶ್ಚಟ ಬದುಕನ್ನೇ ಕತ್ತಲಲ್ಲಿ ಮುಳುಗಿಸುತ್ತದೆ. ವ್ಯಸನ ಮುಕ್ತರಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.
‘ಮಾದಕ ಪದಾರ್ಥಗಳು ಹಾಗೂ ವ್ಯಸನ ಮುಕ್ತತೆಯ ಉಪಾಯಗಳು’ ಕುರಿತು ಡಾ.ಮಹೇಶ ಎಂ. ಅವರು ಉಪನ್ಯಾಸ ನೀಡಿದರು. ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಮಹಾದೇವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಂ.ಹಿರೇಮಠ, ನಿರ್ಮಲ ಬಿ.ಆರ್, ಪಿ.ಬಿ.ಕುರುಬೆಟ್ಟ, ಲೋಕನಾಥ ಪುಠಾಣಿಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.