ADVERTISEMENT

ಪಠ್ಯ ಬದಲಾದರಷ್ಟೇ ಪ್ರಗತಿ ಸಾಧ್ಯ: ಸರಸ್ವತಿ ಮಹಾರಾಜ್‌

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 13:29 IST
Last Updated 18 ಡಿಸೆಂಬರ್ 2018, 13:29 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನದಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಮಹಾರಾಜ್ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನದಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಮಹಾರಾಜ್ ಮಾತನಾಡಿದರು   

ಹುಬ್ಬಳ್ಳಿ: ಸ್ವತಂತ್ರ ಬಂದು ಏಳು ದಶಕ ಕಳೆದರೂ ಈಗಿನ ವಿದ್ಯಾರ್ಥಿಗಳಿಗೆ ಹಳೇ ವಿಷಯವನ್ನೇ ಬೋಧಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆಯಾಗಲು ಸಾಧ್ಯವಿಲ್ಲ ಎಂದು ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಮಹಾರಾಜ್‌ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ನಗರದ ಬಿವಿಬಿ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಒಂದು ದಿನದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಜೀವನದ ಎಲ್ಲ ಸಮಸ್ಯೆಗಳಿಗೆ ಶಿಕ್ಷಣ ದಿವ್ಯ ಔಷಧಿ. ಸಮಸ್ಯೆ ಪರಿಹರಿಸಿಕೊಳ್ಳಲು ಶಿಕ್ಷಣ ಅನುಕೂಲವಾಗಬೇಕು. ಆದರೆ, ಈಗ ಶಿಕ್ಷಣವೇ ಸಮಸ್ಯೆಯಾಗುತ್ತಿದೆ. ಮನುಷ್ಯನನ್ನು ದೇಶಭಕ್ತ ಹಾಗೂ ಚಿಂತಕನನ್ನಾಗಿ ರೂಪಿಸುವ ಸಾಮರ್ಥ್ಯ ಶಿಕ್ಷಣಕ್ಕಿದೆ. ಆದ್ದರಿಂದ ಬದಲಾದ ಕಾಲಮಾನಕ್ಕೆ ತಕ್ಕಂತೆ ಕಲಿಕಾ ಪದ್ಧತಿ ಕೂಡ ಬದಲಾಗಬೇಕು’ ಎಂದರು.

ADVERTISEMENT

‘ಧರ್ಮ ಮತ್ತು ಶಿಕ್ಷಣವನ್ನು ಒಂದಾಗಿ ಯೋಚಿಸದೇ ಹೋದರೆ ಉತ್ತಮ ಪ್ರಜೆಗಳನ್ನು ರೂಪಿಸಲು ಆಗುವುದಿಲ್ಲ. ಈಗಿನ ಕಲಿಕಾ ಪದ್ಧತಿಯಿಂದ ಆತ್ಮ ಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ಇತಿಹಾಸ ನಮ್ಮ ದೇಶದವರು ಬರೆದಿದ್ದು ಅಲ್ಲ, ಯಾರೊ ಬರೆದಿದ್ದನ್ನು ನಾವು ಈಗಿನ ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ. ಶಿಕ್ಷಕರು ಮೂರು ’ಪಿ‘ ಗಾಗಿ (ಪೇಮೆಂಟ್‌, ಪ್ರಮೋಷನ್‌ ಹಾಗೂ ಪೆನ್ಶನ್‌ ಬಿಟ್ಟು) ಹೋರಾಟ ಮಾಡುವುದರ ಜೊತೆಗೆ ದೇಶಕ್ಕೆ ಉತ್ತಮ ಮಕ್ಕಳನ್ನು ರೂಪಿಸುವುದರತ್ತ ಗಮನ ಕೊಡಬೇಕು’ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

‘ದೇಶ ನಿರ್ಮಾಣಕ್ಕೆ ಅಗತ್ಯವಿರುವ ವಿದ್ಯಾರ್ಥಿಗಳನ್ನು ರೂಪಿಸುವವರು ಶಿಕ್ಷಕರು. ಅವರಿಗೆ ಶಿಕ್ಷಣ ಬೋಧನೆಗಿಂತ ಉಳಿದ ಸಮಸ್ಯೆಗಳು ದೊಡ್ಡವು ಎನಿಸಬಾರದು. ಸಮರ್ಥ ಶಿಕ್ಷಕ ಮಾತ್ರ ರಾಷ್ಟ್ರರಕ್ಷಕ ಎನಿಸಿಕೊಳ್ಳುತ್ತಾನೆ’ ಎಂದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪುರ ಮಾತನಾಡಿ ‘ಶಿಕ್ಷಕರ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಲೇ ಬಂದಿದ್ದೇವೆ. ಇದರ ಜೊತೆಗೆ ಶಿಕ್ಷಕರು ಕೂಡ ಶಿಕ್ಷಣ ಪದ್ಧತಿ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು’ ಎಂದರು.

ಕೆಎಲ್‌ಇ ಶಿಕ್ಷಣ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ‘ಶಿಕ್ಷಣ ಆರಂಭವಾದ ಮೊದಲ ದಿನದಿಂದಲೂ ಗುಣಮಟ್ಟಕ್ಕೆ ಒತ್ತು ನೀಡುವ ಕೆಲಸ ನಡೆಯುತ್ತಿದೆ. ಹಿಂದೆ ವಿದ್ಯಾರ್ಥಿಗಳಲ್ಲಿ ಗುರುವಿನ ಬಗ್ಗೆ ಅಪಾರವಾದ ಗೌರವ ಇರುತ್ತಿದೆ. ಈಗ ವಿದ್ಯಾರ್ಥಿಗಳನ್ನು ಕಂಡರೆ ಗುರುಗಳೇ ಹೆದರುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮೇಯರ್ ಸುಧೀರ ಸರಾಫ್‌, ಧಾರವಾಡ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಲಕ್ಷಣ ಎಸ್‌. ಪಾಟೀಲ, ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ವೈ. ಕಡಿವಾಲ, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸಂರಕ್ಷರ ಕೃ. ನರಹರಿ, ರಾಷ್ಟ್ರೀಯ ಅಧ್ಯಕ್ಷ ಜಗದೀಶ ಪ್ರಸಾದ ಸಿಂಘಾಲ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ ಮತ್ತು ದಕ್ಷಿಣ ಮಧ್ಯ ಕ್ಷೇತ್ರ ಪ್ರಮುಖ ಬಾಲಕೃಷ್ಣ ಭಟ್‌ ಇದ್ದರು.

ಮಧ್ಯಾಹ್ನ ನಡೆದ ವಿಚಾರ ಸಂಕಿರಣದಲ್ಲಿ ಶೈಕ್ಷಣಿಕ ಗುಣಮಟ್ಟ ಪರಿಕಲ್ಪನೆ ಮತ್ತು ಸವಾಲುಗಳು ಕುರಿತು ಪ್ರಜ್ಞಾಪ್ರವಾಹದ ದಕ್ಷಿಣ ಮಧ್ಯಕ್ಷೇತ್ರದ ಸಂಯೋಜಕ ರಘುನಂದನ ಮಾತನಾಡಿದರು. ಬಳಿಕ ಶೈಕ್ಷಣಿಕ ನಿರ್ಣಯಗಳು ಮಂಡನೆ ಮತ್ತು ಶಿಕ್ಷಕರ ಸಮಸ್ಯೆಗಳು ಕುರಿತು ಸಂವಾದ ಜರುಗಿತು.

ಸಂಘದ ರಾಜ್ಯ ಘಟಕದ ಅಧಯಕ್ಷ ಸಂದೀಪ ಬೂದಿಹಾಳ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ಸಹಪ್ರಧಾನ ಕಾರ್ಯದರ್ಶಿ ಎ. ಗಂಗಾಧರಚಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.