ಧಾರವಾಡ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತ್ಯುತ್ಸವದಲ್ಲಿ ಸೋಮವಾರ ನಗರದ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನದಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆಯ ಲೋಹದ ಬೃಹತ್ ಫಲಕವನ್ನು ಸಚಿವ ಸಂತೋಷ್ ಎಸ್.ಲಾಡ್ ಅನಾವರಣಗೊಳಿಸಿದರು.
ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ವತಿಯಿಂದ ಫಲಕವನ್ನು (ಸಂವಿಧಾನ ಪುಸ್ತಕ ಮಾದರಿ) ನಿರ್ಮಿಸಲಾಗಿದೆ. ಸಂವಿಧಾನದ ಪ್ರಸ್ತಾವನೆಯನ್ನು ಕನ್ನಡ ಮತ್ತು ಇಂಗ್ಲಿಷ್ ಲಿಪಿಯಲ್ಲಿ ಚಿನ್ನ ಲೇಪಿತ ಸ್ಟೇನ್‌ಲೆಸ್ ಸ್ಟೀಲ್ ಹಾಳೆಯಲ್ಲಿ ಮುದ್ರಿಸಲಾಗಿದೆ.
10 ಅಡಿ ಎತ್ತರ ಮತ್ತು 12 ಅಡಿ ಅಗಲ, 13 ಕ್ವಿಂಟಲ್ ತೂಕ ಇದೆ. ಉದ್ಯಾನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆಯ ಮಹತ್ವ, ತಿಳಿದುಕೊಳ್ಳಬಹುದು.
‘₹ 25 ಲಕ್ಷ ವೆಚ್ಚದಲ್ಲಿ ಸಂವಿಧಾನ ಪೀಠಿಕೆ ಫಲಕ ನಿರ್ಮಾಣ ಮಾಡಲಾಗಿದೆ. ಸ್ಟೇನ್ ಲೆಸ್ ಸ್ಟೀಲ್‌ನಿಂದ ಇದನ್ನು ತಯಾರಿಸಲಾಗಿದ್ದು, ತುಕ್ಕುಹಿಡಿಯುವುದಿಲ್ಲ’ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ’ಪ್ರಜಾವಾಣಿ’ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹೆಚ್ಚುವರಿ ಗೀತಾ ಸಿ.ಡಿ., ತಹಶೀಲ್ದಾರ್, ಡಿ.ಎಚ್.ಹೂಗಾರ, ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಮಂಜುನಾಥ ಬೆಟ್ಟೆನ್ನವರ, ಮಯೂರ ಮೋರೆ, ಪಾಲಿಕೆ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿಜಯಕುಮಾರ, ವಲಯ ಸಹಾಯಕ ಆಯುಕ್ತರಾದ ಅರವಿಂದ ಜಮಖಂಡಿ, ಶಂಕರ ಪಾಟೀಲ, ಜಗದೀಶ ದೊಡ್ಡಮನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.