ADVERTISEMENT

ರೈತರ ಮಕ್ಕಳ ಮೀಸಲಾತಿ ಹೆಚ್ಚಿಸಲು ಪ್ರಸ್ತಾವ: ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 19:43 IST
Last Updated 27 ಫೆಬ್ರುವರಿ 2021, 19:43 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 33ನೇ ಘಟಿಕೋತ್ಸವದಲ್ಲಿ ಚಿನ್ನದ ಹುಡುಗ ಸಂಜಯ ಕಲ್ಲುಗುಡಿ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಪದಕ ಹಾಗೂ ಪದವಿ ಪ್ರದಾನ ಮಾಡಿದರು. ಕುಲಪತಿ ಡಾ. ಎಂ.ಬಿ.ಚೆಟ್ಟಿ ಇದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 33ನೇ ಘಟಿಕೋತ್ಸವದಲ್ಲಿ ಚಿನ್ನದ ಹುಡುಗ ಸಂಜಯ ಕಲ್ಲುಗುಡಿ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಪದಕ ಹಾಗೂ ಪದವಿ ಪ್ರದಾನ ಮಾಡಿದರು. ಕುಲಪತಿ ಡಾ. ಎಂ.ಬಿ.ಚೆಟ್ಟಿ ಇದ್ದಾರೆ.   

ಧಾರವಾಡ: ‘ಕೃಷಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರೈತರ ಮಕ್ಕಳಿಗೆ ಈಗಿರುವ ಶೇ 40ರ ಮೀಸಲಾತಿಯನ್ನು ಶೇ 50ಕ್ಕೆ ಹೆಚ್ಚಿಸಲು ಬಜೆಟ್‌ನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 33ನೇ ಘಟಿಕೋತ್ಸವದಲ್ಲಿ 890 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ರೈತರನ್ನು ನಿರ್ಲಕ್ಷಿಸಿದರೆ ದೇಶಕ್ಕೆ ದುರಂತ ಕಾಡಲಿದೆ. ಹೀಗಾಗಿ ರೈತರ ಸಾಂಪ್ರದಾಯಿಕ ಕೃಷಿ ಶೈಲಿಯನ್ನು ಮೌಲ್ಯಾಧಾರಿತ ಕೃಷಿಗೆ ಬದಲಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ. ಹೀಗಾಗಿ ಒಕ್ಕಲುತನದ ಅನುಭವವಿರುವ ಕೃಷಿಕರ ಮಕ್ಕಳಿಗೆ ಕೃಷಿಯಲ್ಲಿ ಆಧುನಿಕತೆಯನ್ನು ಕಲಿಸಿದರೆ ಆಮೂಲಾಗ್ರ ಬದಲಾವಣೆ ತರಲು ಸಾಧ್ಯ. ಆ ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು’ ಎಂದರು.

ADVERTISEMENT

‘ಕೃಷಿ ವಿಶ್ವವಿದ್ಯಾಲಯದಲ್ಲಿರುವ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರನ್ನು ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳ ಉಸ್ತುವಾರಿ ನೀಡಿ ರೈತರೊಂದಿಗೆ ನೇರ ಸಂಪರ್ಕದಲ್ಲಿರುವಂತೆ ಮಾಡಲು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸೂಚಿಸಲಾಗಿದೆ. ಅದರಂತೆಯೇ ಕೊಪ್ಪಳದಲ್ಲಿ ಜಾರಿಗೆ ತಂದಿರುವ ‘ಕೃಷಿ ಸಂಜೀವಿನಿ’ ಎಂಬ ಸಂಚಾರಿ ಪ್ರಯೋಗಾಲಯ ಹಾಗೂ ಕೃಷಿಕರಿಗೆ ಸ್ವಾಭಿಮಾನಿ ರೈತರ ಕಾರ್ಡ್‌ ನೀಡುವ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಹೇಳಿದರು.

ಬಿಎಸ್ಸಿ ಕೃಷಿ ವಿಷಯದಲ್ಲಿ ಹನುಮನಮಟ್ಟಿ ಕಾಲೇಜಿನ ಜಯಂತ ಕಲ್ಲುಗುಡಿ ಅತಿಹೆಚ್ಚು ಚಿನ್ನದ ಪದಕ ಪಡೆದು ಚಿನ್ನದ ಹುಡುಗನಾಗಿ ಹೊರಹೊಮ್ಮಿದರು. ಸಾಧನೆ ಕುರಿತು ಪ್ರತಿಕ್ರಿಯಿಸಿದ ಜಯಂತ, ‘ಕೃಷಿ ಕುಟುಂಬದ ಹಿನ್ನೆಲೆ ಇರುವ ನನ್ನ ಪಾಲಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ದಾಬಾಸ್‌ ಪೇಟೆಯಲ್ಲಿ ಶಾಲಾ ಶಿಕ್ಷಕರು. ಕೃಷಿಕರ ಏಳಿಗೆಗಾಗಿ ದುಡಿಯುವ ಕನಸು ಕಂಡಿರುವ ನಾನು, ಸದ್ಯ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಾಗಿ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.