ADVERTISEMENT

ನೀರು ಪೂರೈಕೆ ಖಾಸಗೀಕರಣಕ್ಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:26 IST
Last Updated 19 ಸೆಪ್ಟೆಂಬರ್ 2020, 16:26 IST
ನೀರು ಪೂರೈಕೆ ಖಾಸಗೀಕರಣ ಖಂಡಿಸಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘದವರು ಕೆಯುಐಡಿಎಫ್‌ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ನೀರು ಪೂರೈಕೆ ಖಾಸಗೀಕರಣ ಖಂಡಿಸಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘದವರು ಕೆಯುಐಡಿಎಫ್‌ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ನೀರು ಪೂರೈಕೆಯನ್ನು ಖಾಸಗೀಕರಣ ಖಂಡಿಸಿ,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘದವರು ನಗರದ ಐಟಿ ಪಾರ್ಕ್‌ನಲ್ಲಿರುವ ಕೆಯುಐಡಿಎಫ್‌ಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸರ್ಕಾರವು ಜಲಮಂಡಳಿ ನೌಕರರ ಅಭಿಪ್ರಾಯವನ್ನು ಪಡೆಯದೆ, ಹುಬ್ಬಳ್ಳಿ-ಧಾರವಾಡದ ನೀರು ಪೂರೈಕೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಮೆ.ಎಲ್ ಅಂಡ್ ಟಿ ಕಂಪನಿಗೆ ವಹಿಸಿಸಲು ತೀರ್ಮಾನಿಸಿದೆ ಎಂದು ಸಂಘದವರು ಕೆಯುಐಡಿಎಫ್‌ಸಿ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ನಿರ್ವಹಣೆಯ ವಿವಿಧ ಹುದ್ದೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.ಖಾಸಗೀಕರಣಕ್ಕೂ ಮುಂಚೆ ನೌಕರರ ಸೇವಾ ಭದ್ರತೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ ಚರ್ಚಿಸಿಲ್ಲ.

ADVERTISEMENT

ಅವರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೋ ಅದೇ ರೀತಿ ಖಾಸಗಿ ಕಂಪನಿಗೆ ಅವರ ಸೇವೆ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಇದು ಖಂಡನೀಯ. ಹಾಗಾಗಿ, ನೌಕರರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಬೇಕು.

ಈ ವಿಷಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು, ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಬೇಕು. ನೀರು ಪೂರೈಕೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗೆ ವಹಿಸದೆ,ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯೇ ನಿರ್ವಹಿಸಲು ಸೂಚನೆ ನೀಡಬೇಕು. ಜತೆಗೆ, ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.