ADVERTISEMENT

ಧಾರವಾಡ | ರೈಲಿನಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು: ₹8 ಲಕ್ಷ ಪರಿಹಾರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:58 IST
Last Updated 9 ಆಗಸ್ಟ್ 2025, 4:58 IST
   

ಧಾರವಾಡ: ರೈಲಿನ ಬಾಗಿಲ ಬಳಿ ಪ್ರಯಾಣಿಕ ಆಯತಪ್ಪಿ ಬಿದ್ದು ಸಾವಿಗೀಡಾದ ಪ್ರಕರಣದಲ್ಲಿ ಮೃತನ ಕುಟುಂಬದವರಿಗೆ ₹ 8 ಲಕ್ಷ ಪರಿಹಾರ ನೀಡಲು ನೈರುತ್ಯ ರೈಲ್ವೆಗೆ (ಹುಬ್ಬಳ್ಳಿ) ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪ್ರಕರಣದ ವೆಚ್ಚ ₹ 10 ಸಾವಿರ ಹಾಗೂ ಒಂದು ತಿಂಗಳೊಳಗೆ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ.

ಏನಿದು ಪ್ರಕರಣ?: ಹುಬ್ಬಳ್ಳಿಯ ಕೇಶವನಗರದ ಕೀರ್ತಿವತಿ ಮತ್ತು ಸುಧೀಂದ್ರ ಕುಲಕರ್ಣಿ ದಂಪತಿ 2023 ಫೆಬ್ರುವರಿ 4ರಂದು ಯಶವಂತಪುರ ನಿಲ್ದಾಣದಿಂದ ರೈಲಿನಲ್ಲಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ರೈಲು ರಾತ್ರಿ 11.50 ಕ್ಕೆ ಹೊರಟಿತ್ತು. ಸುಧೀಂದ್ರ ಅವರು ಶೌಚಾಲಯಕ್ಕೆ ಹೋಗಿದ್ದಾಗ ಬೋಗಿಯ ಬಾಗಿಲು ತೆರದು ಅವರು ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದರು.

ADVERTISEMENT

ರೈಲ್ವೆ ದುರ್ಘಟನೆಯಲ್ಲಿ ಸಾವಿಗೀಡಾದರೆ ಇಲಾಖೆಯಿಂದ ಮೃತನ ಕುಟುಂಬಕ್ಕೆ ₹ 8 ಲಕ್ಷ ಪರಿಹಾರ ನೀಡಬೇಕು ಎಂಬ ನಿಯಮ ಇದೆ. ರೈಲ್ವೆ ನ್ಯಾಯಾಧೀಕರಣದಲ್ಲಿ ದಾವೆ ಹೂಡಿ ಪರಿಹಾರ ಪಡೆಯಬೇಕು, ಗ್ರಾಹಕರ ಆಯೋಗದಲ್ಲಿ ಅವರು ವಿಮಾ ಹಣವನ್ನು ಕೇಳುವಂತಿಲ್ಲ ಎಂದು ಸುಧೀಂದ್ರ ಅವರ ಕುಟುಂಬಕ್ಕೆ ವಿಮಾ ಹಣ ನೀಡಲು ರೈಲ್ವೆಯವರು ನಿರಾಕರಿಸಿದ್ದರು.

ಕೀರ್ತಿವತಿ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ 2025 ಫೆಬ್ರುವರಿ 4ರಂದು ದೂರು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.