ಹುಬ್ಬಳ್ಳಿ: ‘ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆಯನ್ನು ನೈರುತ್ಯ ರೈಲ್ವೆಯು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ಸು ಕಂಡಿದೆ. ಹುಬ್ಬಳ್ಳಿ ವಿಭಾಗದಲ್ಲಿ ಹೆಚ್ಚು ಸಂಚಾರವಿರುವ ಹೊಸಪೇಟೆ ಪ್ರದೇಶದಲ್ಲಿ ಈ ವ್ಯವಸ್ಥೆ ಅಳವಡಿಕೆಯಿಂದಾಗಿ ಸಕಾರಾತ್ಮಕ ಫಲಿತಾಂಶ ದೊರೆತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಭಾರತೀಯ ರೈಲ್ವೆಯು ಎಲ್ಲಾ ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಿದೆ. ಇದರಿಂದ ಸ್ಟೇಷನ್ ಮಾಸ್ಟರ್‌ಗಳಿಗೆ ರೈಲು ಸಂಚಾರದ ನೈಜ ಸಮಯದ ವೀಕ್ಷಣೆ, ಸಕಾಲದಲ್ಲಿ ಗೇಟ್ ಮುಚ್ಚುವಿಕೆ ಖಚಿತಪಡಿಸಿಕೊಳ್ಳಲು ಅನುಕೂಲವಾಗುತ್ತಿದೆ. ಅಪಘಾತ ಕಡಿಮೆಯಾಗುವ ನಿರೀಕ್ಷೆ ಸಹ ಇದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಕನಿಷ್ಠ ಎರಡು ಐಪಿ ಸಕ್ರಿಯ ಸಿಸಿ ಟಿ.ವಿ ಕ್ಯಾಮೆರಾಗಳು, ನೆಟ್‌ವರ್ಕ್ ವಿಡಿಯೊ ರೆಕಾರ್ಡರ್‌ಗಳು, ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆ ಮತ್ತು ಸೌರ ಫಲಕ ಅಳವಡಿಸಲಾಗಿದೆ. ಇದರಿಂದ ನಿರಂತರ ಮೇಲ್ವಿಚಾರಣೆ ಸಾಧ್ಯವಾಗಿದೆ’ ಎಂದಿದ್ದಾರೆ.
‘ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆಯು ಮಹತ್ವದ ಕಾರ್ಯವಾಗಿದೆ. ತೊಂದರೆಯಿಲ್ಲದೆ ರೈಲು ಸಂಚಾರ ನಿರ್ವಹಿಸಲು ಇದು ನೆರವಾಗುತ್ತದೆ. ರಸ್ತೆ ಹಾಗೂ ರೈಲು ಬಳಕೆದಾರರಿಬ್ಬರಿಗೂ ಅನುಕೂಲಕಾರಿಯಾಗಿದೆ’ ಎಂದು ನೈರುತ್ಯ ರೈಲ್ವೆಯ ಮಹಾಪ್ರಬಂಧಕ ಮುಕುಲ್ ಸರಣ್ ಮಾಥುರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.