ADVERTISEMENT

ತೋರಣಗಲ್ಲು–ರಂಜಿತ್‌ಪುರ ದ್ವಿಪಥ ರೈಲ್ವೆ ಮಾರ್ಗಕ್ಕೆ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:31 IST
Last Updated 18 ಜುಲೈ 2025, 4:31 IST
ರೈಲು
ರೈಲು   

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಿಭಾಗದಲ್ಲಿ ಸರಕು ಸಾಗಣೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕಾಗಿ ಬಳ್ಳಾರಿ ಜಿಲ್ಲೆಯ ತೋರಣಗಲ್ಲು– ರಂಜಿತ್‌ಪುರ ನಡುವೆ ದ್ವಿಪಥ ರೈಲು ಮಾರ್ಗ ನಿರ್ಮಿಸುವುದಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. 

ಒಟ್ಟು 23 ಕಿ.ಮೀ. ಉದ್ದದ ಒಂದೇ ಟ್ರ್ಯಾಕ್‌ನಲ್ಲಿ ಸರಕು ಸಾಗಣೆ ಸಾಕಷ್ಟು ವೃದ್ಧಿಸಿದೆ. ಭವಿಷ್ಯದಲ್ಲಿ ಇನ್ನೂ ಸರಕು ಸಾಗಣೆ ಹೆಚ್ಚಳವಾಗುವುದನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಇದನ್ನು ವಿಶೇಷ ರೈಲ್ವೆ ಯೋಜನೆ ಎಂದು ಪರಿಗಣಿಸಿ ₹458.83 ಕೋಟಿ ವೆಚ್ಚಕ್ಕೆ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಲಾಗಿದೆ. 

ಈ ಯೋಜನೆಯು ‘ಗತಿಶಕ್ತಿ ಕಾರ್ಗೋ ಟರ್ಮಿನಲ್‌’ ಎಂದು ಗುರುತಿಸಲಾಗಿದ್ದು, ತ್ವರಿತಗತಿಯಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಇದರಿಂದ ಸರಕು ಸಾಗಣೆ ವ್ಯವಸ್ಥೆಗೆ ಉತ್ತೇಜನೆ ದೊರೆಯಲಿದೆ. ಮುಖ್ಯವಾಗಿ ಬಳ್ಳಾರಿಯ ದೋಣಿಮಲೈ ಮತ್ತು ಎನ್‌ಎಂಡಿಸಿ ಪೆಲೆಟ್ ಘಟಕಗಳಿಂದ ಪೆಲೆಟ್ ಲೋಡ್‌ಗಳನ್ನು, ಬಿಎಂಎಂ ಹಾಗೂ ಇತರ ಲೋಹ ಧಾತು ಉತ್ಪಾದಕರಿಂದ ಕುಮಾರಸ್ವಾಮಿ ಗಣಿಯಿಂದ ಕಬ್ಬಿಣದ ಅದಿರು ಸಾಗಣೆ ಮತ್ತು ನಂದಿಹಳ್ಳಿ ಸೈಡಿಂಗ್‌ನಿಂದ ಜೆಎಸ್‌ಡಬ್ಲ್ಯೂಗೆ ಸಂಪನ್ಮೂಲ ಸಾಗಣೆ ಮಾಡುವುದಕ್ಕೆ ಈ ಮಾರ್ಗವು ನೆರವಾಗಲಿದೆ.

ADVERTISEMENT

ಈ ಯೋಜನೆಯು ಅನುಷ್ಠಾನ ಆಗುವುದಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ನಿರಂತರ ಪ್ರಯತ್ನ ಕಾರಣವಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.