ADVERTISEMENT

‘ರೈಲು ನಿಲ್ದಾಣಕ್ಕೆ ಹಿಂಬದಿ ಪ್ರವೇಶ ದ್ವಾರ ಆರಂಭಿಸಿ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 14:06 IST
Last Updated 16 ಜನವರಿ 2019, 14:06 IST
ನೈರುತ್ಯ ರೈಲ್ವೆ ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌ ಅವರಿಗೆ ಮನವಿ ಸಲ್ಲಿಸಿದರು
ನೈರುತ್ಯ ರೈಲ್ವೆ ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌ ಅವರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಗದಗ ರಸ್ತೆಯ ಕಡೆಯಿಂದ ಇನ್ನೊಂದು ಪ್ರವೇಶ ದ್ವಾರವನ್ನು ಆರಂಬಿಸಬೇಕು ಎಂದು ರೈಲ್ವೆ ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮಂಗಳವಾರ ಸಿಂಗ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಂಗಿ, ‘2018ರ ಫೆಬ್ರುವರಿಯಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರನ್ನು ಭೇಟಿಯಾಗಿದ್ದೆವು. ಶೀಘ್ರವೇ ಪ್ರವೇಶ ದ್ವಾರ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಪ್ರವೇಶ ದ್ವಾರ ಆರಂಭವಾದರೆ ದೇಶಪಾಂಡೆ ನಗರ, ಕೇಶ್ವಾಪುರ, ವಿಜಯನಗರ, ವಿಶ್ವೇಶ್ವರ ನಗರ, ಕುಸುಗಲ್‌ ರಸ್ತೆ, ಗದಗ ರಸ್ತೆಯ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದರು.

ಅಲ್ಲದೇ, ಮುಖ್ಯ ಪ್ರವೇಶ ದ್ವಾರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.

ADVERTISEMENT

‘ರಾತ್ರಿ ವೇಳೆ ಹುಬ್ಬಳ್ಳಿಯಿಂದ ಮಂಗಳೂರಿಗೆ ರೈಲ್ವೆ ಸೌಕರ್ಯವನ್ನು ಒದಗಿಸಬೇಕು ಹಾಗೂ ಅಳ್ನಾವರ, ದಾಂಡೇಲಿ ಮಧ್ಯೆ ರೈಲು ಸಂಚಾರವನ್ನು ಪುನರಾರಂಭಿಸಬೇಕು’ ಎಂದೂ ಸಿಂಘಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.