ಹುಬ್ಬಳ್ಳಿ: ನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಲಾಕ್‌ಡೌನ್ ನಡುವೆಯೂ ವಾಹನ ಸವಾರರು ಪರದಾಡುವಂತಾಯಿತು.
ಸಂಜೆ ಐದು ಗಂಟೆ ಸುಮಾರಿಗೆ ಗುಡುಗಿನ ಆರ್ಭಟದೊಂದಿಗೆ ಆರಂಭವಾದ ಮಳೆ ಸುಮಾರು ಒಂದು ತಾಸು ಸುರಿಯಿತು. ಅಗತ್ಯ ಸೇವೆಗಳಿಗಷ್ಟೇ ಅವಕಾಶ ನೀಡಿರುವುದರಿಂದ ರಸ್ತೆಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ವಾಹನ ಸವಾರರು ಇದ್ದರು. ರೈಲು ನಿಲ್ದಾಣದ ಬಳಿಯಿದ್ದ ಕಟ್ಟಡ ಕಾರ್ಮಿಕರು, ವಿವಿಧ ಕಂಪನಿಗಳ ಕೆಲಸಕ್ಕೆ ಹೋದವರು ನಿತ್ಯದ ಕೆಲಸ ಮುಗಿಸಿ ವಾಪಸ್ ಮನೆಗೆ ಹೊರಟಿದ್ದಾಗ ಮಳೆಯಲ್ಲಿ ಸಿಲುಕಿದರು.
ಹೆಗ್ಗೇರಿಯ ಜೆ.ಪಿ. ನಗರದಲ್ಲಿ ಶಿಥಿಲಗೊಂಡಿದ್ದ ಯಲ್ಲುಬಾಯಿ ಸೋಳಂಕಿ ಎಂಬುವರ ಮನೆ ಮಳೆಗೆ ಮತ್ತಷ್ಟು ಕುಸಿದಿದೆ. ಹಳೇ ಹುಬ್ಬಳ್ಳಿ, ಅಶೋಕ ನಗರದ ರೈಲ್ವೆ ಸೇತುವೆ, ಹಳೇ ಹುಬ್ಬಳ್ಳಿ ಭಾಗದಲ್ಲಿಯೂ ರಸ್ತೆ ಗುಂಟ ನೀರು ಹರಿಯಿತು. ನಗರದ ವಿವಿಧೆಡೆ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದ್ದು, ಅದನ್ನು ಹಾಗೆಯೇ ಬಿಡಲಾಗಿದೆ. ರಸ್ತೆ ಮಧ್ಯದಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗಳು ವಾಹನ ಸವಾರರಿಗೆ ಅಡ್ಡಿಯುಂಟು ಮಾಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.