ADVERTISEMENT

ಧಾರವಾಡ: ಗುಂಡಿ ಬಿದ್ದ ರಸ್ತೆಗಳ ದುರಸ್ತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 13:42 IST
Last Updated 7 ಜೂನ್ 2020, 13:42 IST
ಹುಬ್ಬಳ್ಳಿಯ ಜನತಾ ಬಜಾರ್‌ ಎದುರಿನ ರಸ್ತೆಯಲ್ಲಿ ಡಾಂಬಾರು ಹಾಕುತ್ತಿದ್ದ ಚಿತ್ರಣ
ಹುಬ್ಬಳ್ಳಿಯ ಜನತಾ ಬಜಾರ್‌ ಎದುರಿನ ರಸ್ತೆಯಲ್ಲಿ ಡಾಂಬಾರು ಹಾಕುತ್ತಿದ್ದ ಚಿತ್ರಣ   

ಹುಬ್ಬಳ್ಳಿ: ನಗರದ ಜನತಾ ಬಜಾರ್‌, ದಾಜೀಬಾನ್‌ ಪೇಟೆ ರಸ್ತೆಯಲ್ಲಿ ಸಾಕಷ್ಟು ದೊಡ್ಡದಾಗಿ ಬಿದ್ದಿರುವ ಗುಂಡಿಗಳಿಗೆ ಮಹಾನಗರ ಪಾಲಿಕೆ ಡಾಂಬರ್ ಹಾಕುವ ಮೂಲಕ ದುರಸ್ತಿ ಕಾರ್ಯ ನಡೆಸಿದೆ.

ಶನಿವಾರದಿಂದ ಜನತಾ ಬಜಾರ್‌ನ ಮುಂದಿನ ರಸ್ತೆಯಲ್ಲಿ ಗುಂಡಿ ಮುಚ್ಚಿ, ಡಾಂಬಾರು ಹಾಕಿ ತಾತ್ಕಾಲಿಕ ದುರಸ್ತಿ ಮಾಡುವ ಕಾರ್ಯ ನಡೆದಿತ್ತು. ಈ ರಸ್ತೆಯಲ್ಲಿ ಮೊದಲಿನಿಂದಲೂ ಗುಂಡಿಗಳಿದ್ದವು. ಇತ್ತೀಚಿಗೆ ಮೇಲಿಂದ ಮೇಲೆ ಮಳೆ ಸುರಿದ ಕಾರಣ ಗುಂಡಿಗಳ ಆಳ ಇನ್ನಷ್ಟು ಹೆಚ್ಚಾಗಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗಿತ್ತು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ದಾಜೀಬಾನ್‌ ಪೇಟೆ, ದುರ್ಗದ ಬೈಲ್‌ಗೆ ಹೋಗಲು ಜನತಾ ಬಜಾರ್‌ ಮುಂದಿನ ರಸ್ತೆ ಪ್ರಮುಖ ಮಾರ್ಗವಾಗಿದೆ. ವೃತ್ತದ ಸಮೀಪದಲ್ಲೇ ಮಾರುಕಟ್ಟೆ ಕೂಡ ಇರುವುದರಿಂದ ವಾಹನಗಳ ಸಂಚಾರ ಮತ್ತು ಜನದಟ್ಟಣೆ ಕೂಡ ಹೆಚ್ಚಿರುತ್ತಿತ್ತು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ’ಮಳೆಗಾಲ ಆರಂಭಕ್ಕೂ ಮುನ್ನವೇ ಅವಳಿ ನಗರದಲ್ಲಿ ಗುಂಡಿ ಬಿದ್ದಿರುವ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲು ಗುತ್ತಿಗೆ ಕೊಡಲಾಗಿತ್ತು. ಕೆಲವೆಡೆ ಕಾಮಗಾರಿ ಕೂಡ ಆರಂಭವಾಗಿತ್ತು. ಬಳಿಕ ಲಾಕ್‌ಡೌನ್‌ ಘೋಷಣೆಯಾದ ಕಾರಣ ಕೆಲಸ ಪೂರ್ಣಗೊಳ್ಳಲಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಕಾಮಗಾರಿ ಮಾಡಲು ಆಗುವುದಿಲ್ಲ. ಮಳೆಗಾಲದ ಬಳಿಕ ಬಾಕಿ ಕೆಲಸ ಮಾಡಲಾಗುವುದು‘ ಎಂದರು.

ಹೆಚ್ಚು ಜನ ಸಂಚಾರದ ಪ್ರದೇಶವಾದ ಕಾರಣ ಜನತಾ ಬಜಾರ್‌ ಮುಂದಿನ ರಸ್ತೆಯಲ್ಲಿ ತಾತ್ಕಾಲಿಕವಾಗಿ ಡಾಂಬಾರು ಹಾಕಿ ದುರಸ್ತಿ ಮಾಡಿಸಲಾಗುತ್ತಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.