ADVERTISEMENT

ನಾಯಕರ ಉತ್ಸವವಾಗದಿರಲಿ ಗಣರಾಜ್ಯೋತ್ಸವ: ತಹಶೀಲ್ದಾರ್ ಶಶಿಧರ ಮಾಡ್ಯಾಳ

ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 13:02 IST
Last Updated 26 ಜನವರಿ 2020, 13:02 IST
ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವದಲ್ಲಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರು ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವದಲ್ಲಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರು ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಗಣರಾಜ್ಯೋತ್ಸವವು ಯಾವುದೇ ಮುಖಂಡರ, ನಾಯಕರ ಉತ್ಸವವಾಗದೇ ಪ್ರಜೆಗಳ ಉತ್ಸವವಾಗಬೇಕು ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾರತವು ಪ್ರಜಾಪ್ರಭುತ್ವದ ಕಿರೀಟದೊಂದಿಗೆ ಸಾಗಿಬಂದ ದೇಶ. ಇಲ್ಲಿರುವ ಆಡಳಿತವು ಜನರಿಗಾಗಿ ಇರುವ ಆಡಳಿತ. ನಮ್ಮ ಪ್ರತಿಯೊಂದು ಹೆಜ್ಜೆಯೂ ಸಂವಿಧಾನದ ಪಥದಲ್ಲಿ ಮುಂದುವರಿಯಬೇಕಾಗಿದೆ.ಒಬ್ಬ ಸಾಮಾನ್ಯ ವ್ಯಕ್ತಿಯು ಈ ದೇಶದಲ್ಲಿ ತನ್ನ ಜೀವನವನ್ನು ಹೇಗೆ ರೂಪಿಸಿಕೊಳ್ಳಬಹುದೆಂದು ಸಂವಿಧಾನ ನಮಗೆ ಹೇಳಿ ಕೊಡುತ್ತದೆ. ಧರ್ಮ, ಜನಾಂಗ, ಜಾತಿ, ಮತ, ಭಾಷೆಗೆ ಪ್ರಭಾವಿತರಾಗದೇ ಯಾವುದೇ ರಾಜಕೀಯ ಪಕ್ಷ, ಪಂಗಡದ ಪ್ರಭಾವಕ್ಕೆ ಒಳಗಾಗದೇ ಹೇಗೆ ಕೆಲಸ ಮಾಡುವುದೆಂದು ನಮಗೆ ಕಲಿಸಿಕೊಟ್ಟಿದೆ ಎಂದು ಹೇಳಿದರು.

ADVERTISEMENT

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಇಚ್ಛೆಯಂತೆ ಜನರು ತಮ್ಮ ಹಕ್ಕು, ಕರ್ತವ್ಯವನ್ನು ಅರ್ಥ ಮಾಡಿಕೊಂಡು ಪರಿಶುದ್ಧ ಹೃದಯದಿಂದ ಕೆಲಸ ಮಾಡುವುದೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವವೆಂದರೆ ಇನ್ನೊಬ್ಬರ ಹಕ್ಕು ಮೊಟಕುಗೊಳಿಸುವುದಲ್ಲ, ಪ್ರತಿಯೊಬ್ಬ ಪ್ರಜೆಯು ತನ್ನ ಹಕ್ಕು ಮತ್ತು ಕರ್ತವ್ಯದೊಂದಿಗೆ ಇನ್ನೊಬ್ಬರನ್ನು ಗೌರವಿಸುವುದೇ ನಮ್ಮ ಸಂವಿಧಾನದ ಮೂಲಭೂತ ಆಶಯವಾಗಿದೆ ಎಂದರು.

ಸಂವಿಧಾನವನ್ನು ಗೌರವಿಸುವ ಜೊತೆಗೆ ಅದರ ಬೆಳಕಿನಲ್ಲಿ ಮುಂದೆ ಸಾಗಬೇಕಿದೆ. ಪೂರ್ವಾಗ್ರಹ ಪೀಡಿತರಾಗದೇ ಪ್ರತಿಯೊಬ್ಬರನ್ನು ಗೌರವಿಸುವ, ನಾವೆಲ್ಲರೂ ಭಾರತೀಯರು ಎನ್ನುವ ಏಕತೆಯ ಮಂತ್ರವನ್ನು ಪಾಲಿಸಬೇಕು ಎಂದು ಹೇಳಿದರು.

ಹರಿಹಾರ ವಿತರಣೆ:ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ₹27.47 ಕೋಟಿ ಪರಿಹಾರಧನವನ್ನು ವಿತರಿಸಲಾಗಿದೆ ಎಂದರು.

2018–19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಹುಬ್ಬಳ್ಳಿ ತಾಲ್ಲೂಕಿನ 6,657 ರೈತರಿಗೆ ₹ 22.07 ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ 12,831 ರೈತರಿಗೆ ₹ 35.75 ಕೋಟಿ ವಿಮಾ ಪರಿಹಾರ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ ತಾಲ್ಲೂಕಿನ 11,230 ರೈತರಿಗೆ ₹2.28 ಕೋಟಿ ಮತ್ತು ಕೇಂದ್ರ ಸರ್ಕಾರದಿಂದ ಮೂರು ಕಂತುಗಳಲ್ಲಿ ₹7.96 ಕೋಟಿ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದರು.

ಕೈಜೋಡಿಸಿ:‘ಸ್ವಚ್ಛ ಸರ್ವೇಕ್ಷಣ 2020’ ಆ್ಯಪ್‌ನಲ್ಲಿ ಹುಬ್ಬಳ್ಳಿ–ಧಾರವಾಡ ನಗರದ ಸ್ವಚ್ಛತೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಅವಳಿ ನಗರದ ಜನರು ಈ ಆ್ಯಪ್‌ ಅನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಪ್ರಶ್ನೆಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುವ ಮೂಲಕ ಪಾಲಿಕೆಯು ಸ್ವಚ್ಛತೆಯಲ್ಲಿ ಅಗ್ರಸ್ಥಾನ ಪಡೆಯಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸನ್ಮಾನ:ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀರಾಮ ವಿ.ಬೇಂದ್ರೆ, ಕೆ.ಜಿ.ಕುಲಕರ್ಣಿ, ಪೊಲೀಸ್‌ ಲಾಠಿಯಲ್ಲಿ ಕೊಳಲು ವಾದನ ಮಾಡುವ ಚಂದ್ರಕಾಂತ ಎಸ್‌.ಹುಟಗಿ, ಯೋಗಪಟು ರೇಖಾ ಬಿ.ಹನಮಸಾಗರ, ಕರಾಟೆ ಪಟುಗಳಾದ ರಾಹುಲ್‌, ರೋಜಾ, ರೋಹಿತ್‌, ಜಂಪ್‌ರೋಪ್‌ ಆಟಗಾರ ಅಭಿಷೇಕ್ ಎನ್‌. ಪವಾರ ಮತ್ತು ಕೃತಿಕಾ ಬಿ.ಹಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪಥಸಂಚಲನ:ನಗರದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್‌ ಮತ್ತು ಗೈಡ್ಸ್‌, ಗೃಹರಕ್ಷಕದಳ, ಪೊಲೀಸ್‌, ಅಗ್ನಿ ಶಾಮಕ ದಳದ ಸಿಬ್ಬಂದಿ ಆಕರ್ಷಕ ಪಥಸಂಚನ ನಡೆಸಿದರು. ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್‌, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.