ADVERTISEMENT

ಹೆಚ್ಚುತ್ತಿರುವ ಅವಕಾಶಗಳನ್ನು ಬೆನ್ನತ್ತಲು ಸಲಹೆ

ಗಯಾನಾ ರಿಪಬ್ಲಿಕ್‌ನ ಹೈಕಮಿಷನರ್‌ ಡಾ. ಕೆ.ಜೆ.ಶ್ರೀನಿವಾಸ್ ಅವರಿಂದ ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 13:49 IST
Last Updated 22 ಜುಲೈ 2019, 13:49 IST
ಧಾರವಾಡದ ಸೇಂಟ್ ಜೋಸೆಫ್ ಶಾಲೆಗೆ ಸೋಮವಾರ ಭೇಟಿ ನೀಡಿದ ಡಾ. ಕೆ.ಜೆ.ಶ್ರೀನಿವಾಸ್ ಅವರನ್ನು ಶಿಕ್ಷಕಿಯರು ಕೈಹಿಡಿದು ಶಾಲೆಗೆ ಬರಮಾಡಿಕೊಂಡರೆ ವಿದ್ಯಾರ್ಥಿಗಳು ಚಪ್ಪಾಳೆಯ ಮಳೆಗರೆದರು
ಧಾರವಾಡದ ಸೇಂಟ್ ಜೋಸೆಫ್ ಶಾಲೆಗೆ ಸೋಮವಾರ ಭೇಟಿ ನೀಡಿದ ಡಾ. ಕೆ.ಜೆ.ಶ್ರೀನಿವಾಸ್ ಅವರನ್ನು ಶಿಕ್ಷಕಿಯರು ಕೈಹಿಡಿದು ಶಾಲೆಗೆ ಬರಮಾಡಿಕೊಂಡರೆ ವಿದ್ಯಾರ್ಥಿಗಳು ಚಪ್ಪಾಳೆಯ ಮಳೆಗರೆದರು   

ಧಾರವಾಡ: ‘ಹಿಂದೆಂದಿಗಿಂತಲೂ ಇಂದು ವಿಫುಲ ಅವಕಾಶಗಳಿದ್ದು, ಇಂದಿನ ಜನಾಂಗ ಅದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಗಯಾನಾ ರಿಪಬ್ಲಿಕ್‌ನಹೈಕಮಿನಷನರ್‌ ಡಾ. ಕೆ.ಜೆ.ಶ್ರೀನಿವಾಸ್ ಹೇಳಿದರು.

ತಾವು ಕಲಿತ ಇಲ್ಲಿನ ಸೇಂಟ್‌ ಜೋಸೆಫ್ ಪ್ರೌಢಶಾಲೆಗೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ತಮ್ಮ ಆಸಕ್ತ ಕ್ಷೇತ್ರದಲ್ಲೇ ಇಂದು ಉದ್ಯೋಗ ಕಂಡುಕೊಳ್ಳಬಹುದಾಗಿದೆ. ಆ ಕೆಲಸಕ್ಕೆ ಅಗತ್ಯವಿರುವ ಜ್ಞಾನವನ್ನು ಸಂಪಾದಿಸಿ ಮುನ್ನುಗ್ಗಬೇಕೇ ಹೊರತು, ಸೋತು ಹಿಂದೆ ಸರಿಯಬಾರದು’ ಎಂದು ಸಲಹೆ ನೀಡಿದರು.

ADVERTISEMENT

‘ನಾವಿನ್ಯತೆ ಹಾಗೂ ಕ್ರಿಯಾಶೀಲತೆ ಭಾರತೀಯರ ಸಾಮರ್ಥ್ಯ. ಸಿಲಿಕಾನ್‌ ಸಿಟಿ ಎಂದೂ ಕರೆಯಲಾಗುವ ಕ್ಯಾಲಿಫೋರ್ನಿಯಾದಲ್ಲಿರುವ ಒಟ್ಟು ಕಂಪನಿಗಳಲ್ಲಿ ಶೇ 16ರಷ್ಟು ಭಾರತೀಯರದ್ದು ಎಂದರೆ ನಮ್ಮವರ ಸಾಧನೆಯನ್ನು ಗಮನಿಸಬಹುದು. ಅಮೆರಿಕದ ನಾಸಾದಲ್ಲೂ ಸಾಕಷ್ಟು ವಿಜ್ಞಾನಿಗಳು ಭಾರತೀಯರು. ಹೀಗಾಗಿ ಇಡೀ ಜಗತ್ತೇ ಭಾರತೀಯರ ಸಾಧನೆ ಕುರಿತು ಕುತೂಹಲದಿಂದ ನೋಡುತ್ತಿದೆ. ಹೀಗಿರುವಾಗಿ ನಮ್ಮ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡಿಯ್ಯಲು ಯುವಶಕ್ತಿ ಪ್ರಯತ್ನಿಸಬೇಕು’ ಎಂದರು.

‘ಇವೆಲ್ಲವನ್ನೂ ಸಾಧಿಸಲು ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಯಶಸ್ಸಿಗೆ ಮನಸ್ಸು ಹಾಗೂ ಹೃದಯವನ್ನು ಸಮತೋಲನದಲ್ಲಿ ಕಾಪಾಡಬೇಕು. ಸೋಲಿಗೆ ಎಂದೂ ಧೈರ್ಯಗುಂದಬಾರದು. ಬದಲಿಗೆ ಅದನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕು. ಬಹಳಷ್ಟು ಬಾರಿ ಆರಂಭದಲ್ಲಿ ಎದುರಾಗುವ ಸೋಲಿಗೆ ಹೆದರುವ ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯತ್ತ ಸಾಗುವುದನ್ನೇ ನಿಲ್ಲಿಸಿಬಿಡುತ್ತಾರೆ. ಆದರೆ ಸೋಲನ್ನೇ ಹೆಮ್ಮೆಟ್ಟಿಸಿ, ಅವಕಾಶಗಳ ಬಾಗಿಲು ತಟ್ಟುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಶ್ರೀನಿವಾಸ್ ಸಲಹೆ ನೀಡಿದರು.

‘ಸಮಾಜಕ್ಕಾಗಿ ನಾವು ನಮ್ಮ ಅಮೂಲ್ಯ ಸೇವೆಯನ್ನು ಮೀಸಲಿಡಬೇಕು. ಹೀಗಾದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಇಷ್ಟು ಮಾತ್ರವಲ್ಲ ಆತ್ಮತೃಪ್ತಿಯೂ ಸಿಗುತ್ತದೆ. ಹಿರಿಯರಿಗೆ ಮತ್ತು ಕಲಿಸಿದ ಗುರುಗಳಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ದೇಶದ ಮಾನವ ಸಂಪನ್ಮೂಲದ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಹೀಗಾಗಿ ಅವರನ್ನು ಸದಾ ಗೌರವಿಸಬೇಕು’ ಎಂದರು.

ಇದಕ್ಕೂ ಮೊದಲು ಶ್ರೀನಿವಾಸ್ ಅವರು ಶಾಲೆಗೆ ಬರುವ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತು. ತಮ್ಮಲ್ಲಿ ಕಲಿತು ಉನ್ನತ ಹುದ್ದೆಗೆ ಏರಿದ ವಿದ್ಯಾರ್ಥಿಯನ್ನು ಬರಮಾಡಿಕೊಳ್ಳಲು ಶಿಕ್ಷಕರು ತೀವ್ರ ಉತ್ಸುಕರಾಗಿದ್ದರು. ಹಾಗೆಯೇ ತಾವು ಕಲಿಯುತ್ತಿರುವ ಶಾಲೆಯಲ್ಲೇ ಕಲಿತ ವಿದ್ಯಾರ್ಥಿ 26 ವರ್ಷಗಳ ನಂತರ ಹೈಕಮಿಷನರ್ ಆಗಿ ಬರುತ್ತಿರುವ ಸಂಭ್ರಮ ವಿದ್ಯಾರ್ಥಿಗಳಲ್ಲೂ ಇತ್ತು.

ಶಿಕ್ಷಕಿಯರು ಶ್ರೀನಿವಾಸ್ ಅವರನ್ನು ಕೈಹಿಡಿದು ಶಾಲೆ ಒಳಗೆ ಕರೆತಂದರು. ಎನ್‌ಸಿಸಿ ವಿದ್ಯಾರ್ಥಿಗಳು ಆಕರ್ಷಕ ಕವಾಯತಿನೊಂದಿಗೆ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳು ಚಪ್ಪಾಳೆಯ ಮಳೆ ಸುರಿಸಿದರು. ಬೋಧಕ ಹಾಗೂ ಬೋಧಕೇರ ಸಿಬ್ಬಂದಿ ವತಿಯಿಂದ ಡಾ. ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.