ADVERTISEMENT

2ಎ ಮೀಸಲಾತಿಗೆ ಆಗ್ರಹಿಸಿ ಹಕ್ಕೊತ್ತಾಯ ರ‍್ಯಾಲಿ

ಲಿಂಗಾಯತ ಪಂಚಮಸಾಲಿ ಸಮಾಜದಿಂದ ಚನ್ನಮ್ಮ ವೃತ್ತದಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:18 IST
Last Updated 31 ಜುಲೈ 2022, 5:18 IST
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು   

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 (ಎ) ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಸಮಾಜದ ಜನರು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್‌ ಹಕ್ಕೊತ್ತಾಯ ರ‍್ಯಾಲಿ ನಡೆಸಿದರು.

ನಗರದ ನೆಹರೂ ಕ್ರೀಡಾಂಗಣದಿಂದ ಆರಂಭವಾದ ರ‍್ಯಾಲಿ ಸಿದ್ಧಪ್ಪ ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಚನ್ನಮ್ಮ ವೃತ್ತ ತಲುಪಿತು. ರ‍್ಯಾಲಿಯುದ್ದಕ್ಕೂ ಸಮಾಜದ ಮುಖಂಡರು ‘ಜೈ ಜೈ ಪಂಚಮಸಾಲಿ’ ಎಂಬ ಘೋಷಣೆ ಕೂಗಿದರು. ಚನ್ನಮ್ಮ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒಂದೂವರೆ ಗಂಟೆ ಧರಣಿ ನಡೆಸಲಾಯಿತು.

ಇದಕ್ಕೂ ಮುನ್ನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜಕ್ಕೆ ನೀಡಿರುವ ಭರವಸೆಯನ್ನು ನೆನಪಿಸಲು ಹಕ್ಕೊತ್ತಾಯ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಶ್ರಾವಣ ಮಾಸದ ಒಳಗೆ ಅವರು ಸಮಾಜಕ್ಕೆ ಸಿಹಿ ಸುದ್ದಿ ಕೊಡುವ ವಿಶ್ವಾಸ ಇದೆ ಎಂದರು.

ADVERTISEMENT

ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸಮಾಜದವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಮಾಜದ ಆಶೀರ್ವಾದ ಪಡೆದು ಬೆಳೆದವರು ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಋಣ ತೀರಿಸುವ ಕೆಲಸ ಮಾಡಬೇಕು. ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಪರ್ಯಾಯವಾಗಿ ಸಾವಿರ ಪೀಠಗಳನ್ನು ಸ್ಥಾಪಿಸಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪಕ್ಷದ ವಿಚಾರದಲ್ಲಿ ನಮ್ಮ ಸಮಾಜದವರು ಬೇರೆ ಬೇರೆ ಆದರೂ 2ಎ ಮೀಸಲಾತಿ ವಿಚಾರಕ್ಕೆ ಬಂದರೆ ನಾವೆಲ್ಲರೂ ಒಂದೇ ಎಂದು ಪ್ರತಿಪಾದಿಸಿದರು.

ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ಸಮಾಜದವರು ಬಹುಸಂಖ್ಯಾತರಾಗಿದ್ದರೂ ಸೌಲಭ್ಯ ಪಡೆಯುವಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಸಮಾಜಕ್ಕೆ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಉದ್ದೇಶ. ಇದಕ್ಕಾಗಿ ಸ್ವಾಮೀಜಿ ಅವರು ವಿಶ್ರಾಂತಿ ಪಡೆಯದೆ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಹೇಳಿದರು.

ಶಿವಲೀಲಾ ವಿನಯ ಕುಲಕರ್ಣಿ, ನಾಗರಾಜ ಗೌರಿ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್, ಎಸ್.ಐ.ಚಿಕ್ಕನಗೌಡ, ರಾಮನಗೌಡ ಪಾಟೀಲ ಮಾತನಾಡಿದರು. ಉಪವಿಭಾಗಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ಶಾಸಕ ಅರವಿಂದ ಬೆಲ್ಲದ, ಬಾಪುಗೌಡ ಪಾಟೀಲ, ಶಿವಾನಂದ ಅಂಬಡಗಟ್ಟಿ, ರಾಜಶೇಖರ ಮೆಣಸಿನಕಾಯಿ, ಶಿವಾನಂದ ಮಾಯಕಾರ, ಶಶಿಕಾಂತ ಪಡಸಾಲಗಿ, ಗುರುರಾಜ ಹುಣಸಿಮರದ, ನಿಂಗಣ್ಣ ಕರಿಕಟ್ಟಿ, ಪುಟ್ಟನಗೌಡ್ರ, ಅರವಿಂದ ಕಟಗಿ, ನಟ ಸಚಿನ್ ಪಾಟೀಲ, ರತ್ನಾ ಕಳ್ಳಿಮನಿ, ದೀಪಾ ನಾಗರಾಜ ಗೌರಿ, ವಂದನಾ ನೂಲ್ವಿ ಇದ್ದರು.

ವಾಹನ ಸವಾರರ ಪರದಾಟ

ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಸುಮಾರು ಒಂದೂವರೆ ಗಂಟೆ ರಸ್ತೆ ತಡೆ ನಡೆಸಿದರು. ಇದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ವಾಹನ ಸವಾರರು ಪರದಾಡಬೇಕಾಯಿತು. ಚನ್ನಮ್ಮ ವೃತ್ತದ ಮಾರ್ಗವಾಗಿ ಹೋಗಲು ಯತ್ನಿಸಿದ ವಾಹನಗಳ ಎದುರು ಕುಳಿತು ಪ್ರತಿಭಟನಾಕಾರರು ತಡೆದರು. ಇದನ್ನು ಪ್ರಶ್ನಿಸಿದ ಸವಾರರೊಂದಿಗೆ ವಾಗ್ವಾದವನ್ನೂ ನಡೆಸಿದರು.

ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಗರದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಬಸವೇಶ್ವರ, ಸಂಗೊಳ್ಳಿ ರಾಯಣ್ಣ ಮತ್ತು ಚನ್ನಮ್ಮನವರ ಪ್ರತಿಮೆಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.