ADVERTISEMENT

ಶಿಕ್ಷಣ ಸಚಿವರ ಹೇಳಿಕೆಗೆ ‘ರುಪ್ಸಾ’ ವಿರೋಧ

ಷರತ್ತು ವಿಧಿಸದೇ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 12:05 IST
Last Updated 27 ನವೆಂಬರ್ 2020, 12:05 IST

ಹುಬ್ಬಳ್ಳಿ: ಕೋವಿಡ್‌ನಿಂದಾಗಿ ಎಂಟು ತಿಂಗಳುಗಳಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದು, ಶುಲ್ಕ ಪಾವತಿಸದಿದ್ದರೂ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುತ್ತೇವೆ ಎಂದು ಶಿಕ್ಷಣ ಸಚಿವರು ನೀಡಿರುವ ಹೇಳಿಕೆ ವಾಪಸ್‌ ಪಡೆಯಬೇಕು ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಒತ್ತಾಯಿಸಿದೆ.

ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಧರ ದಿಂಡೂರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಈ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಆರಂಭವಾಗದ ಕಾರಣ ದಾಖಲಾತಿ ಸ್ಥಗಿತಗೊಂಡಿವೆ. ಇದರಿಂದ ಖಾಸಗಿ ಶಾಲೆಗಳಿಗೆ ತಮ್ಮ ಸಿಬ್ಬಂದಿಗೆ ವೇತನ ಕೊಡಲು ಕೂಡ ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲೂ ಸಚಿವರು ಆ ರೀತಿಯ ಹೇಳಿಕೆ ಕೊಡಬಾರದಿತ್ತು. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಯಾವುದೇ ನಿಬಂಧನೆ ವಿಧಿಸಬಾರದು, ಶಾಲಾ ವಾಹನಗಳ ಹಾಗೂ ಕಟ್ಟಡ ಸಾಲಗಳ ಮರುಪಾವತಿ ಕಂತು ಪಾವತಿಸಲು ಒಂದು ವರ್ಷದ ತನಕ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಾಗಿ ಶಾಲೆಗಳು ಪ್ರಾರಂಭವಾಗುವ ತನಕ ಸರ್ಕಾರ ಕನಿಷ್ಠ ₹5,000, ಬೋಧಕೇತರ ಸಿಬ್ಬಂದಿಗೆ ₹2,000 ಮಾಸಿಕ ಗೌರವಧನ ನೀಡಬೇಕು. 2020–21ನೇ ಸಾಲಿನ ಸಂಪೂರ್ಣ ಆರ್‌ಟಿಇ ಶುಲ್ಕ ಮರುಪಾವತಿ ಮಾಡಬೇಕು, ಕಳೆದ 15 ವರ್ಷಗಳಿಂದ ಸರ್ಕಾರ ಯಾವುದೇ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿಲ್ಲ. ಆದಷ್ಟು ಬೇಗನೆ ಈ ಪ್ರಕ್ರಿಯೆ ಆರಂಭಿಸಬೇಕು’ ಎಂದು ಕೋರಿದರು.

ADVERTISEMENT

‘ಕೋವಿಡ್‌ ಕಾರಣಕ್ಕೆ ಈ ವರ್ಷದ ಶೈಕ್ಷಣಿಕ ವರ್ಷ ಹೇಗೆ, ಯಾವಾಗ? ಎನ್ನುವ ಸ್ಪಷ್ಟತೆಯಿಲ್ಲ. ಆದ್ದರಿಂದ ಶಿಕ್ಷಣ ಇಲಾಖೆ ತಕ್ಷಣವೇ ಶೈಕ್ಷಣಿಕ ಮಾರ್ಗಸೂಚಿ ಬಿಡುಗಡೆ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.