ADVERTISEMENT

ಜನ್ಮದಿನ ಸಾರ್ಥಕಗೊಳಿಸಿದ ಸೇವೆ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 12:24 IST
Last Updated 17 ಡಿಸೆಂಬರ್ 2018, 12:24 IST
ಶಾಸಕ ಜಗದೀಶ ಶೆಟ್ಟರ್ ಅವರ 63ನೇ ಜನ್ಮದಿನದ ಅಂಗವಾಗಿ, ಬಿಜೆಪಿ ಯುವ ಮೋರ್ಚಾ ಘಟಕದ ಕಾರ್ಯಕರ್ತರು ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ, ಶೆಟ್ಟರ್ ಅವರ ಸಮ್ಮುಖದಲ್ಲಿ ಸೋಮವಾರ ರಕ್ತದಾನ ಮಾಡಿದರು. ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ರಕ್ತನಿಧಿಯ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ಇದ್ದಾರೆ

ಹುಬ್ಬಳ್ಳಿ: ‘ನನ್ನ ಜನ್ಮದಿನದಂದು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯಂತಹ ಸಾಮಾಜಿಕ ಸೇವೆ ಮಾಡುವ ಮೂಲಕ, ಈ ದಿನವನ್ನು ಸಾರ್ಥಕಗೊಳಿಸಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಜಗದೀಶ ಶೆಟ್ಟರ್ ಅವರ ಜನ್ಮದಿನದ ಅಂಗವಾಗಿ, ಸಂಕಲ್ಪ ಚಾರಿಟೆಬಲ್ ಟ್ರಸ್ಟ್‌, ಜಗದೀಶ ಶೆಟ್ಟರ್ ಅಭಿಮಾನಿ ಸೇವಾ ಸಂಘ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳಲು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ. ಆದರೆ, ರಾಜಕೀಯ ಕ್ಷೇತ್ರದಲ್ಲಿರುವುದರಿಂದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಚರಿಸಿದಾಗ ಬೇಡ ಎನ್ನಲಾಗದು. ಅದಕ್ಕಾಗಿ ಸರಳವಾಗಿ, ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಗಳ ಮೂಲಕ ಜನ್ಮದಿನ ಆಚರಿಸುತ್ತಿರುವುದು ಸಾರ್ಥಕ ತಂದಿದೆ’ ಎಂದರು.

ADVERTISEMENT

ಸನ್ಮಾನ:

ಕಾರ್ಯಕ್ರಮದಲ್ಲಿ ಜಗದೀಶ ಶೆಟ್ಟರ್ ಮತ್ತು ಅವರ ಪತ್ನಿ ಶಿಲ್ಪಾ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ, ನೇತ್ರ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿದ್ದ ಡಾ. ಸವಿತಾ ನಾಡಗೌಡ, ಡಾ. ವೆಂಕಟರಾಮ ಕಟ್ಟಿ, ಡಾ. ಪ್ರಿಯಾ ಕಟ್ಟಿ, ಡಾ. ಜಯಾ, ಡಾ. ರಾಜಶೇಖರ, ಡಾ. ಕುನಾಲ್ ಹಾಗೂ ಡಾ. ಪ್ರಮೋದ್ ಅವರನ್ನು ಶೆಟ್ಟರ್ ದಂಪತಿ ಸನ್ಮಾನಿಸಿದರು.

ನೇತ್ರ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಶೆಟ್ಟರ್ ದಂಪತಿ ಹಣ್ಣುಗಳನ್ನು ವಿತರಿಸಿದರು.ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಮುಖಂಡ ಸಾವಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.