ADVERTISEMENT

ಚಿರತೆಗೆ ಹುಡುಕಾಟ: ವರದಿ ನಿರೀಕ್ಷೆಯಲ್ಲಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 16:51 IST
Last Updated 24 ಸೆಪ್ಟೆಂಬರ್ 2021, 16:51 IST

ಹುಬ್ಬಳ್ಳಿ: ನೃಪತುಂಗ ಬೆಟ್ಟ ಹಾಗೂ ಸುತ್ತಲಿನ ಪ್ರದೇಶದ ಜನರಲ್ಲಿ ಭೀತಿ ಉಂಟು ಮಾಡಿರುವ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿದಿದ್ದು, ಶುಕ್ರವಾರವೂ ಯಾವುದೇ ಸುಳಿವು ಸಿಗಲಿಲ್ಲ.

ಚಿರತೆ ಹೆಜ್ಜೆಗುರುತು ಪತ್ತೆಯಾಗಿ ಒಂದು ವಾರ ಕಳೆದಿದೆ. ಹೆಜ್ಜೆಗುರುತು ಪತ್ತೆಯಾಗಿದ್ದರಿಂದ ಚಿರತೆ ಇರುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೃಢವಾಗಿತ್ತು. ಇದರಿಂದಾಗಿ ಸ್ಥಳೀಯ ಜನರಲ್ಲಿ ಆತಂಕವೂ ಹೆಚ್ಚಾಗಿತ್ತು. ಧಾರವಾಡ ತಾಲ್ಲೂಕಿನ ಕವಲಗೇರಿಯಲ್ಲಿಯೂ ಚಿರತೆ ಪತ್ತೆಯಾಗಿದ್ದರಿಂದ ಎರಡೂ ಒಂದೇ ಚಿರತೆಯೇ ಎನ್ನುವ ಅನುಮಾನ ಅಧಿಕಾರಿಗಳನ್ನು ಕಾಡುತ್ತಿದೆ.

ಎರಡೂ ಸ್ಥಳಗಳಲ್ಲಿ ಪತ್ತೆಯಾದ ಚಿರತೆಯ ಹೆಜ್ಜೆಗುರುತಿನ ಮಾದರಿಗಳನ್ನು ಶುಕ್ರವಾರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೋಮವಾರದ ವೇಳೆಗೆ ವರದಿ ಬರಲಿದ್ದು, ಈ ವರದಿಗಾಗಿ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ.

ADVERTISEMENT

ಈ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ‘ಇಲಾಖೆಯ ಕೆಲ ಸಿಬ್ಬಂದಿ ಕವಲಗೇರಿಯಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನುಳಿದ ಸಿಬ್ಬಂದಿ ಬೆಟ್ಟದ ಸಮೀಪದಲ್ಲಿರುವ ವಾಟರ್‌ ಟ್ಯಾಂಕ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಯೋಗಾಲಯದ ವರದಿ ಬರುವ ತನಕ ಈ ಕೆಲಸ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.