ADVERTISEMENT

ಮತದಾನದ ಬಳಿಕ ಸೆಲ್ಫಿ ಸಂಭ್ರಮ

ವೀಲ್‌ಚೇರ್‌ನಲ್ಲಿ ಬಂದು ಮತ ಹಾಕಿ ಉತ್ಸಾಹ ತೋರಿದ ಹಿರಿಯರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:59 IST
Last Updated 4 ಸೆಪ್ಟೆಂಬರ್ 2021, 3:59 IST
ಹುಬ್ಬಳ್ಳಿಯ ದತ್ತಿ ರೋಟರಿ ಕಿವುಡ ಮಕ್ಕಳ ಶಾಲೆಯಲ್ಲಿ ಮತ ಚಲಾಯಿಸಿದ 86 ವರ್ಷದ ಸೀತಾಬಾಯಿ
ಹುಬ್ಬಳ್ಳಿಯ ದತ್ತಿ ರೋಟರಿ ಕಿವುಡ ಮಕ್ಕಳ ಶಾಲೆಯಲ್ಲಿ ಮತ ಚಲಾಯಿಸಿದ 86 ವರ್ಷದ ಸೀತಾಬಾಯಿ   

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ, ನಂತರ ಸ್ವಲ್ಪ ಚೇತರಿಕೆ ಕಂಡಿತು.

ಮತದಾನ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಕೆಲ ಹೊತ್ತಿನಲ್ಲಿ ಹಲವರು ಬಂದು ಮತ ಚಲಾಯಿಸಿದರು. ಬಳಿಕ ಬಹಳಷ್ಟು ಬೂತ್‌ಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತ ಹೋಯಿತು. ಮತದಾನದ ಸಮಯ ಮುಗಿಯಲು ಕೊನೆಯ ಎರಡು ಗಂಟೆಗಳು ಬಾಕಿಯಿದ್ದಾಗ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಬಂದರು.

ಕೋವಿಡ್‌ ಬಾಧಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸೋಂಕಿನಿಂದ ಬಳಲುತ್ತಿದ್ದ 52 ವರ್ಷದ ಮತದಾರರೊಬ್ಬರು 49ನೇ ವಾರ್ಡ್‌ ವ್ಯಾಪ್ತಿಯ ಅಕ್ಷಯ ಕಾಲೊನಿಯಲ್ಲಿರುವ ಐಬಿಎಂಆರ್ ಕಾಲೇಜಿನಲ್ಲಿ ಮತದಾನ ಮಾಡಿದರು.

ADVERTISEMENT

ಬದಾಮಿ ನಗರ, ಬನಶಂಕರಿ ಬಡಾವಣೆ, ವಿನಾಯಕ ಕಾಲೊನಿ, ಸಂತೋಷ ನಗರ, ಲಿಂಗರಾಜ ನಗರ, ವಿವೇಕಾನಂದ ಕಾಲೊನಿ, ನಾಗಶೆಟ್ಟಿಕೊಪ್ಪ, ಭವಾನಿ ನಗರ ಮತ್ತು ಹಳೇ ಹುಬ್ಬಳ್ಳಿ ಸೇರಿದಂತೆ ವಿವಿಧ ಮತಗಟ್ಟೆಗಳಲ್ಲಿ ಮತದಾರರು ಹಕ್ಕು ಚಲಾಯಿಸಿದರು. ಕೆಲವರು ತಮ್ಮ ಕುಟುಂಬ ಸಮೇತರಾಗಿ ಬಂದು ಮತ ಹಾಕಿ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ಕಾಲುನೋವಿನ ಸಮಸ್ಯೆಯಿಂದ ಬಳಲುತ್ತಿರುವವರು, ವಯಸ್ಸಾದವರು ತಮ್ಮ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗೆ ಬಂದಿದ್ದರು. ಅವರಿಗೆ ಕೆಲವು ಕಡೆ ಪೊಲೀಸರು ನೆರವಾದರು. ಬಹಳಷ್ಟು ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಮಾಸ್ಕ್‌ ಧರಿಸಿದ್ದರು. ಆರೋಗ್ಯ ಕಾರ್ಯಕರ್ತರು ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಸ್ಯಾನಿಟೈಸರ್‌ ಹಚ್ಚಿ ಒಳಗೆ ಬಿಡುತ್ತಿದ್ದರು. ಆದರೆ, ಮತಗಟ್ಟೆಗಳ ಸುತ್ತ ನೆರದ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಹಿತೈಷಿಗಳು ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.