ಶಂಕರ ಹಲಗತ್ತಿ
ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಭಾನುವಾರ ಕಾರ್ಯಭಾರ ವಹಿಸಿಕೊಂಡಿದ್ದಾರೆ. 135 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯು ನಾಡಿನ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿ ಫೋಷಣೆ, ಗ್ರಂಥ ಪ್ರಕಟಣೆ ಉದ್ದೇಶಗಳನ್ನು ಹೊಂದಿದೆ. ಸಂಸ್ಥೆಯ ಅಭಿವೃದ್ಧಿ, ಮುಂದಿನ ಕಾರ್ಯಚಟುವಟಿಕೆಗಳ ರೂಪುರೇಷೆ ಕುರಿತು ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
* ಗಡಿ ಭಾಗಗಳಲ್ಲಿ ಕನ್ನಡ ಕಲಿಕೆಗಿರುವ ತೊಂದರೆ ನಿವಾರಣೆ, ಕನ್ನಡ ಶಾಲೆ ಉಳಿವು, ಕನ್ನಡ ಭಾಷೆ ಬೆಳವಣಿಗೆ ನಿಟ್ಟಿನಲ್ಲಿ ಸಂಘದ ಕಾರ್ಯಕ್ರಮಗಳೇನು?
2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ಧಾರೆ. ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಕನ್ನಡ ಕಲಿಕೆ ಒತ್ತು ನೀಡಲು ಶಾಲಾ ಶಿಕ್ಷಣ ಇಲಾಖೆ ಜತೆಗೂಡಿ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ. ಗಡಿ ಭಾಗದಲ್ಲಿನ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲು ಕರ್ನಾಟಕ ಮತ್ತು ಗಡಿ ಭಾಗದ ರಾಜ್ಯ ಸರ್ಕಾರಗಳಿಗೆ ಒತ್ತಡ ಹೇರಲಾಗುವುದು. ಕನ್ನಡ ಬೆಳವಣಿಗೆ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುವುದು.
* ಪುಸಕ್ತಗಳ ಪ್ರಕಟಣೆ, ಡಿಜಿಟಲೀಕರಣ, ಇತರ ಜಿಲ್ಲೆಗಳಿಗೂ ಸಂಘದ ಚಟುವಟಿಕೆ ವಿಸ್ತರಣೆಗೆ ರೂಪಿಸಿರುವ ಯೋಜನೆಗಳಾವವು?
ಈ ಹಿಂದೆ 100ಕ್ಕೂ ಹೆಚ್ಚು ಕೃತಿಗಳನ್ನು ಸಂಘ ಪ್ರಕಟಿಸಿದೆ, ಪುಸ್ತಕ ಪ್ರಕಟಣೆಗೆ ಒತ್ತು ನೀಡಲಾಗುವುದು. ಬೆಂಗಳೂರಿನ ಸಂಸ್ಥೆಯೊಂದಕ್ಕೆ 200 ಪುಸ್ತಕಗಳ ಡಿಜಿಟಲೀಕರಣ ಕಾರ್ಯ ವಹಿಸಿದ್ದೇವೆ. ಕೃತಿಕಾರರು ಸಂಘಕ್ಕೆ ನೀಡಿದ ಪುಸ್ತಕಗಳಲ್ಲಿ ಹಲವನ್ನು ಶಾಲೆಗಳ ಗ್ರಂಥಾಲಯಗಳಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಿಗೂ ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ತಯಾರಿ ಮಾಡಿಕೊಂಡಿದ್ದೇವೆ. ಜಿಲ್ಲೆಗಳಲ್ಲಿ ಸಂಘದ ಕ್ರಿಯಾಶೀಲ ಸದಸ್ಯರನ್ನು ಗುರುತಿಸಿ ಅವರಿಗೆ ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ.
* ಸಂಘಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳುವ ಮತ್ತು ಅನುದಾನ ಹೆಚ್ಚು ತರುವ ಪ್ರಯತ್ನಗಳು ಯಾವ ಹಂತದಲ್ಲಿವೆ?
ಐದು ಎಕರೆ ಜಾಗ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಅವಿರತವಾಗಿ ನಡೆದಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ನಮ್ಮ ಪ್ರಯತ್ನ ಮುಂದುವರಿಯಲಿದೆ. ಸಾಹಿತ್ಯ ಪರಿಷತ್ತನ್ನು ಶಾಶ್ವತ ಅನುದಾನಕ್ಕೆ ಒಳಪಡಿಸಿದಂತೆ ವಿದ್ಯಾವರ್ಧಕ ಸಂಘವನ್ನೂ ಶಾಶ್ವತ ಅನುದಾನಕ್ಕೆ ಒಳಪಡಿಸಬೇಕು ಎಂದು ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಈ ಹಿಂದೆ ಎಲ್ಲ ಶಾಸಕರಿಗೆ ಪತ್ರ ಬರೆಯಲಾಗಿತ್ತು. ಸರ್ಕಾರ ಈವರೆಗೆ ಕ್ರಮವಹಿಸಿಲ್ಲ.
* ಕಾರ್ಯಕ್ರಮಗಳಲ್ಲಿ ಕೆಲವರಿಗಷ್ಟೇ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ದೂರುಗಳ ಕುರಿತು ಏನು ಹೇಳುತ್ತೀರಿ?
ದೂರಿನಲ್ಲಿ ಹುರುಳಿಲ್ಲ. ಎಲ್ಲರಿಗೂ ಪ್ರಾಶಸ್ತ್ಯ ನೀಡಲಾಗುತ್ತಿದೆ. ಸಂಘವು ಎಲ್ಲರದ್ದು. ನಾವು ಯಾರನ್ನು ದ್ವೇಷಿಸುವುದಿಲ್ಲ.
* ಹೊಸ ಕಾರ್ಯಕ್ರಮಗಳು…
ಕನ್ನಡ ಕಾಳಜಿಯಳ್ಳ ಹಿರಿಯರ ‘ಮಾರ್ಗದರ್ಶಕ ಸಮಿತಿ’ ರಚಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಡಿ.ನಂಜುಂಡಪ್ಪ ವರದಿ, ಸರೋಜಿನಿ ಮಹಿಷಿ ವರದಿ ಅನುಷ್ಠಾನ, ವಾಸ್ತವ ಸ್ಥಿತಿ ಅಧ್ಯಯನ ನಡೆಸಲಾಗುವುದು. ಸಂಘದ ‘ವಾಗ್ಭೂಷಣ’ ಪತ್ರಿಕೆ ಒಳಗೊಂಡಂತೆ ಮೌಲ್ವಿಕ ಸಾಹಿತ್ಯ ಪ್ರಕಟಣೆಗೆ ಒತ್ತು ನೀಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.