ADVERTISEMENT

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲಿ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 16:08 IST
Last Updated 1 ಸೆಪ್ಟೆಂಬರ್ 2023, 16:08 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಹುಬ್ಬಳ್ಳಿ: ‘ಪಕ್ಷದಲ್ಲಿರುವ ಹಿರಿಯರನ್ನು ಮತ್ತು ಮುಖಂಡರನ್ನು ಕಡೆಗಣಿಸುವುದು, ಬೆಳಿಗ್ಗೆಯಿಂದ ಸಂಜೆವರೆಗೂ ಆಪರೇಷನ್‌ ಕಮಲ ಮಾಡಿ ಹೊಸಬರನ್ನು ಕರೆ ತರುವುದು ಬಿಜೆಪಿಯ ಕೆಲಸವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಹೈಕಮಾಂಡ್‌ ಅನುಮತಿ ನೀಡಿದರೆ ಕಾಂಗ್ರೆಸ್‌ನ 40-45 ಶಾಸಕರನ್ನು ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ’ ಎನ್ನುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಅವರ ಹೇಳಿಕೆಗೆ, ಶನಿವಾರ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದು ಶಕ್ತಿಯುತವಾದ ಸರ್ಕಾರ ರಚಿಸಿದೆ. ಅಸ್ತಿತ್ವ ಕಳೆದುಕೊಂಡ ಬಿಜೆಪಿಗೆ ಕಾಂಗ್ರೆಸ್‌ನಿಂದ ಯಾರೂ ಹೋಗುವುದಿಲ್ಲ. ಆಪರೇಷನ್‌ ಕಮಲ ಮಾಡುವುದಿದ್ದರೆ, ನಾಳೆಯೇ ಮಾಡಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಬಿಜೆಪಿ ಬೇರೆ ಪಕ್ಷದವರನ್ನು ಕರೆತಂದು ಸರ್ಕಾರ ರಚಿಸುವ ಮೊದಲು ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿ. ಪಕ್ಷದ ಮಾಜಿ ಸಚಿವರನ್ನು, ಶಾಸಕರನ್ನು ಹಾಗೂ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ರಾಜ್ಯದಲ್ಲಿ ಒಮ್ಮೆಯೂ ಸ್ಪಷ್ಟ ಬಹುಮತ ಪಡೆಯದ ಬಿಜೆಪಿಗೆ ಸರ್ಕಾರ ರಚಿಸಲು ಆಪರೇಷನ್‌ ಕಮಲವೊಂದೇ ದಾರಿ’ ಎಂದರು.

ADVERTISEMENT

‘ರಾಜ್ಯ ಬಿಜೆಪಿ ಕೆಲವೇ ಕೆಲವರ ಕೈಯಲ್ಲಿದೆ. ಅವರಿಂದ ಬಿಡಿಸಿಕೊಳ್ಳುವವರೆಗೆ ಅದರ ಸ್ಥಿತಿ ಗಂಭೀರವಾಗಿಯೇ ಇರಲಿದೆ. ಹೀಗೆ ಮುಂದುವರೆದರೆ ಅಧೋಗತಿಗೆ ತಲುಪಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.