ADVERTISEMENT

ಪರಿಶಿಷ್ಟ, ಮಹಿಳಾ ಉದ್ಯಮಿಗಳಿಗೆ ಮೀಸಲಾತಿ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:30 IST
Last Updated 16 ಮೇ 2025, 16:30 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಆರಂಭಗೊಂಡ ನಾಲ್ಕು ದಿನಗಳ ‘ಐಮೆಕ್ಸ್‌–ಹುಬ್ಬಳ್ಳಿ 2025’ ಕೈಗಾರಿಕಾ ಪ್ರದರ್ಶನ ಮೇಳದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಮಳಿಗೆಗೆ ಭೇಟಿ ನೀಡಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ಆರಂಭಗೊಂಡ ನಾಲ್ಕು ದಿನಗಳ ‘ಐಮೆಕ್ಸ್‌–ಹುಬ್ಬಳ್ಳಿ 2025’ ಕೈಗಾರಿಕಾ ಪ್ರದರ್ಶನ ಮೇಳದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಮಳಿಗೆಗೆ ಭೇಟಿ ನೀಡಿದರು   

ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ಸ್ವಾಮ್ಯದ ಉದ್ಯಮಗಳು (ಪಿಎಸ್‌ಯು) ತಮಗೆ ಬೇಕಾದ ಬಿಡಿಭಾಗಗಳನ್ನು ಎಸ್.ಸಿ, ಎಸ್‌.ಟಿ ಉದ್ಯಮಿಗಳಿಂದ ಶೇ 4ರಷ್ಟು ಹಾಗೂ ಮಹಿಳಾ ಉದ್ಯಮಗಳಿಂದ ಶೇ 3ರಷ್ಟು  ಖರೀದಿಸಲು ಮೀಸಲಾತಿ ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ಪರಿಶಿಷ್ಟ ಹಾಗೂ ಮಹಿಳಾ ಉದ್ಯಮಿಗಳು ಪಡೆದುಕೊಳ್ಳಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಯುಕೆಎಸ್‌ಎಸ್‌ಐಎ) ನಗರದ ಕಲ್ಲೂರು ಲೇಔಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ನಾಲ್ಕು ದಿನಗಳ ‘ಐಮೆಕ್ಸ್‌–ಹುಬ್ಬಳ್ಳಿ 2025’ ಕೈಗಾರಿಕಾ ಮೇಳದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

‘ಸರ್ಕಾರಿ ಸ್ವಾಮ್ಯದ ಉದ್ಯಮಗಳು ತಮ್ಮ ಖರೀದಿಯಲ್ಲಿ ಶೇ 25ರಷ್ಟು ಬಿಡಿಭಾಗಗಳನ್ನು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಂದ ಖರೀದಿಸುತ್ತಿವೆ. ಇದರಲ್ಲಿಯೂ ಪರಿಶಿಷ್ಟ ಉದ್ಯಮಿಗಳ ಹಾಗೂ ಮಹಿಳಾ ಉದ್ಯಮಿಗಳ ಕಂಪನಿಗಳಿಂದ ಖರೀದಿಸಲು ಪ್ರಧಾನಿ ಮೋದಿ ಸರ್ಕಾರ ಮೀಸಲಾತಿ ಕಲ್ಪಿಸಿದೆ’ ಎಂದು ಹೇಳಿದರು. 

ADVERTISEMENT

‘ಮಹಿಳಾ ಉದ್ಯಮಿಗಳಿಂದ ನಿರೀಕ್ಷಿತ ಮಟ್ಟದಲ್ಲಿ ಉತ್ಪನ್ನಗಳು ಸಿಗುತ್ತಿಲ್ಲ. ಕೇವಲ ಶೇ 1.5ರಷ್ಟು ಮಾತ್ರ ಖರೀದಿ ನಡೆಯುತ್ತಿದೆ. ಇದರ ಬಗ್ಗೆ ಮಹಿಳಾ ಉದ್ಯಮಿಗಳು ಗಮನ ಹರಿಸಬೇಕು. ಉತ್ತಮ ಗುಣಮಟ್ಟದ ಹಾಗೂ ಬೃಹತ್‌ ಕೈಗಾರಿಕೆಗಳಿಗೆ ಬೇಕಾದ ಉತ್ಪನ್ನಗಳನ್ನು ತಯಾರಿಸಲು ಮುಂದಾಗಬೇಕು’ ಎಂದು ತಿಳಿಸಿದರು. 

‘ಗವರ್ನಮೆಂಟ್‌–ಇ–ಮಾರ್ಕೆಟ್‌ಪ್ಲೆಸ್‌ (ಜಿಇಎಂ) ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳು ಬಿಡಿಭಾಗಗಳನ್ನು ಖರೀದಿಸುತ್ತವೆ. ಕೂಡಲೇ ಉತ್ತರ ಕರ್ನಾಟಕದಲ್ಲಿರುವ ಎಲ್ಲ ಉದ್ಯಮಿಗಳು ಇಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು, ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು. 

‘ಸಣ್ಣ ಹಾಗೂ ಅತಿಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಸರ್ಕಾರ ಹಲವು ಕ್ರಮಕೈಗೊಂಡಿದೆ. ಮೂಲಸೌಕರ್ಯ ಕಲ್ಪಿಸುತ್ತಿದೆ. ಅವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಒಟ್ಟು ಉತ್ಪನ್ನದಲ್ಲಿ (ಜಿಡಿಪಿ) ಶೇ 30ರಷ್ಟು ಕೊಡುಗೆ ಸಣ್ಣ ಕೈಗಾರಿಕೆಗಳಿಂದ ಬರುತ್ತಿದೆ. ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗಾವಕಾಶವನ್ನೂ ಸಣ್ಣ ಕೈಗಾರಿಕೆಗಳು ನೀಡಿವೆ’ ಎಂದರು. 

ಪ್ರಾಸ್ತಾವಿಕವಾಗಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ ನಲವಡಿ ಮಾತನಾಡಿ, ‘ಉತ್ತರ ಕರ್ನಾಟಕ ಭಾಗದ ಸಣ್ಣ ಹಾಗೂ ಅತಿಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಬೃಹತ್‌ ಕೈಗಾರಿಕೆಗಳನ್ನು ಈ ಭಾಗದಲ್ಲಿ ಸ್ಥಾಪಿಸಬೇಕು. ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಪ್ರದರ್ಶನ ಮೇಳ ಆಯೋಜಿಸಲು ಪ್ರತ್ಯೇಕವಾದ ಸ್ಥಳವನ್ನು ಸರ್ಕಾರ ಮಂಜೂರು ಮಾಡಬೇಕು’ ಎಂದು ಬೇಡಿಕೆ ಸಲ್ಲಿಸಿದರು.

ಸಂಘದ ಕಾರ್ಯದರ್ಶಿ ಶಂಕರ ಹಿರೇಮಠ, ಕಾರ್ಯಕ್ರಮ ಸಂಚಾಲಕ ರಮೇಶ ಪಾಟೀಲ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಿವರುದ್ರಪ್ಪ, ಉದ್ಯಮಿಗಳಾದ ಬಿ.ಎಸ್‌. ಜವಳಗಿ, ಜಗದೀಶ ಮಠದ, ಅಶೋಕ ಕುಮಾರ, ಅಶೋಕ ಕಲಬುರ್ಗಿ, ರಮೇಶ ಯಾದವಾಡ, ಭಾಗವಹಿಸಿದ್ದರು.

272 ಮಳಿಗೆ ಪ್ರದರ್ಶನ

ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಮೇಳ ನಡೆಯಿತು. ಪ್ರದರ್ಶನ  ತಮಿಳುನಾಡು ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಭಾಗಗಳ ಕೈಗಾರಿಕೆಗಳು ತಮ್ಮ ಉತ್ಪನ್ನಗಳ ಸುಮಾರು 272 ಮಳಿಗೆಗಳನ್ನು ಇಲ್ಲಿ ತೆರೆದಿವೆ. ಪ್ರದರ್ಶನ ಮೇ 19ರವರೆಗೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.