ADVERTISEMENT

ಧಾರವಾಡ: ಕಲಿಕೆ, ಮರುಕಲಿಕೆ ವೃತ್ತಿ ಜೀವನದ ಭಾಗವಾಗಲಿ

ಕರ್ನಾಟಕ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಡಾ. ಎ.ಎಸ್.ಕಿರಣಕುಮಾರ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 8:37 IST
Last Updated 8 ಅಕ್ಟೋಬರ್ 2021, 8:37 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 70 ಹಾಗೂ 71ನೇ ಘಟಿಕೋತ್ಸವದ ಆನ್‌ಲೈನ್ ವೇದಿಕೆಯಲ್ಲಿ ಡಾ. ಎ.ಎಸ್.ಕಿರಣಕುಮಾರ್ ಮಾತನಾಡಿದರು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 70 ಹಾಗೂ 71ನೇ ಘಟಿಕೋತ್ಸವದ ಆನ್‌ಲೈನ್ ವೇದಿಕೆಯಲ್ಲಿ ಡಾ. ಎ.ಎಸ್.ಕಿರಣಕುಮಾರ್ ಮಾತನಾಡಿದರು   

ಧಾರವಾಡ: ‘ವೇಗವಾಗಿ ಬದಲಾಗುತ್ತಿರುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಕೆ, ಹಳೆಯದನ್ನು ಮರೆಯುವುದು ಹಾಗೂ ಮರುಕಲಿಕೆ ಬದುಕಿನ ಭಾಗವಾದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣಕುಮಾರ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ 70 ಹಾಗೂ 71ನೇ ಘಟಿಕೋತ್ಸವದಲ್ಲಿ ಶುಕ್ರವಾರ ಪಾಲ್ಗೊಂಡು ಘಟಿಕೋತ್ಸವವನ್ನು ಭಾಷಣ ಮಾಡಿದರು.

‘ಕಲಿಕೆ ಎಂಬುದು ನಿರಂತರ. ಉನ್ನತ ಶಿಕ್ಷಣವಾಗಲೀ, ಉದ್ಯೋಗವೇ ಆಗಲಿ, ಕಲಿಕೆ ನಿರಂತರವಾಗಿರಬೇಕು. ಇದಕ್ಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅದರಿಂದ ಕ್ರಿಯಾತ್ಮಕ ಚಟುವಟಿಕೆ ನಡೆಸಲು ಸಾಧ್ಯ’ ಎಂದರು.

ADVERTISEMENT

‘ಇಂದು ಭಾರತ ಇಡೀ ಜಗತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ. ಈ ಕ್ಷೇತ್ರದ ಪ್ರಗತಿಯಿಂದಾಗಿ ಸಾರಿಗೆ, ಸಂಪರ್ಕ, ಸಂವಹನ ಮುಂತಾದ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಅದರಂತೆಯೇ ಕೋವಿಡ್–19ರ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ವ್ಯಾಪಿಸಿದ ಸಂದರ್ಭದಲ್ಲೂ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಯತ್ನದಿಂದಾಗಿ ಸೋಂಕು ಹರಡುವುದನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಒಂದಷ್ಟು ಯಶಸ್ಸು ದೊರೆತಿದೆ’ ಎಂದರು.

‘ಬಿಗ್ ಡಾಟಾ ಮೂಲಕ ಹವಾಮಾನದ ನಿಖರ ಮಾಹಿತಿ ನೀಡಲು ಇಂದು ಸಾಧ್ಯವಾಗಿದೆ. ಇದರಿಂದ ಪ್ರಕೃತಿ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಬಳಕೆಯಲ್ಲಿ ನೀತಿ ರೂಪಿಸಲು ಭವಿಷ್ಯದಲ್ಲಿ ಸಾಧ್ಯವಾಗಲಿದೆ. ಅದರಂತೆಯೇ ಕೃತಕ ಬುದ್ಧಿಮತ್ತೆ ಅಳವಡಿಸಿದ ಡ್ರೋನ್ ಹಾಗೂ ಕಣ್ಗಾವಲು ಕ್ಯಾಮೆರಾ ಬಳಕೆಯಿಂದ ಜನದಟ್ಟಣೆ ಹಾಗೂ ಜನರ ರಕ್ಷಣೆಗೆ ಮತ್ತಷ್ಟು ಆದ್ಯತೆ ನೀಡಲು ಸಾಧ್ಯವಾಗಿದೆ’ ಎಂದು ಡಾ. ಕಿರಣಕುಮಾರ್ ಹೇಳಿದರು.

‘ಕೋವಿಡ್‌–19 ಸೋಂಕು ಮೂಲಕ ಜಗತ್ತನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಸಾಂಕ್ರಾಮಿಕವು ಸೃಷ್ಟಿಸಿದ ಅನಿಶ್ಚಿತತೆಯಿಂದ ಹೊಸ ಸಾಧ್ಯಗಳು ಸಾಧ್ಯವಾಗಿವೆ. ಅದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡು ಆನ್‌ಲೈನ್ ವೇದಿಕೆಯಲ್ಲಿ ಪದವಿ ಪ್ರದಾನ ಸಮಾರಂಭ ಆಯೋಜಿಸಿರುವುದೇ ಸಾಕ್ಷಿ. ಹೀಗಾಗಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕುವ ಮೂಲಕ ವಿದ್ಯಾರ್ಥಿಗಳು ತಮ್ಮ ಹೆಜ್ಜೆ ಗುರುತನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ಜವಾಬ್ದಾರಿಯುತ ಯಶಸ್ವಿ ನಾಗರಿಕರಾಗಬೇಕು’ ಎಂದರು.

ಸಹ ಕುಲಾಧಿಪತಿಯೂ ಆದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಪದವಿ ಪೂರೈಸಿ ವೃತ್ತಿ ಬದುಕಿಗೆ ಕಾಲಿಡುತ್ತಿರುವವರಿಗೆ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಗಂಡುಮೆಟ್ಟಿನ ನಾಡಿನಲ್ಲಿ ಕಲಿತ ವಿದ್ಯಾರ್ಥಿಗಳು ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸಿ ಬದುಕನ್ನು ಸಾರ್ಥಕಗೊಳಿಸಬೇಕು. ಆ ಮೂಲಕ ಇಡೀ ಜಗತ್ತಿಗೆ ನಮ್ಮ ನೈಜ ಪ್ರತಿಭೆ ಮೂಲಕ ಹೊಸ ಸಾಧ್ಯತೆಗಳನ್ನು ಪರಿಚಯಿಸಲು ನಮ್ಮ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು’ ಎಂದರು.

ಕವಿವಿ 40ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪದವಿ ಸೇರಿದಂತೆ ಒಟ್ಟು 40,738ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ನಿಖಾಯದ ಡೀನ್‌ಗಳು ಸಾದರಪಡಿಸಿದ ವಿದ್ಯಾರ್ಥಿಗಳಿಗೆ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ಪದವಿ ಘೋಷಿಸಿದರು. ಇದರೊಂದಿಗೆ ಜೀವಮಾನ ಸಾಧನೆಗಾಗಿ ರಸಾಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ತೇಜರಾಜ ಎಂ. ಅಮ್ಮಿನಭಾವಿ ಅವರಿಗೆ ವಜ್ರಮಹೋತ್ಸವ ಪ್ರಶಸ್ತಿಯನ್ನು ಕುಲಪತಿ ಪ್ರೊ. ಕೆ.ಬಿ.ಗುಡಸಿ ಪ್ರದಾನ ಮಾಡಿದರು. ನಂತರ ವಿಶ್ವವಿದ್ಯಾಲಯ ಕುರಿತು ಸುದೀರ್ಘ ವರದಿಯನ್ನು ಸಾದರಪಡಿಸಿದರು.

ಕಲಾ ವಿಭಾದ ಡೀನ್ ಡಾ. ಮಲ್ಲಿಕಾರ್ಜುನ ಪಾಟೀಲ, ಸಮಾಜ ವಿಜ್ಞಾನ ವಿಭಾಗದ ಡೀನ್ ಡಾ. ಶಕುಂತಲಾ ಡಿ. ಶೆಟ್ಟರ್, ಶಿಕ್ಷಣ ನಿಖಾಯದ ಡೀನ್. ಡಾ. ಆರ್.ಆರ್.ಮದನಕರ್, ವಾಣಿಜ್ಯ ವಿಭಾಗದ ಡೀನ್ ಡಾ. ಎ.ಎನ್. ತಾಮ್ರಗುಂಡಿ,ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ಬಿ. ಬಸವನಗೌಡರ,ಕಾನೂನು ವಿಭಾಗದ ಡೀನ್ ಡಾ. ಐ.ಶರತ್‌ಬಾಬ, ಮ್ಯಾನೇಜ್ಮೆಂಟ್ ವಿಭಾಗದ ಡೀನ್ ಡಾ. ರಮೇಶ ಆರ್. ಕುಲಕರ್ಣಿ ತಮ್ಮ ನಿಖಾಯದಿಂದ ಪದವಿಗೆ ಅರ್ಹರಾದ ವಿದ್ಯಾರ್ಥಿಗಳನ್ನು ಸಾದರಪಡಿಸಿದರು.

ಮೌಲ್ಯಮಾಪನ ಕುಲಸಚಿವ ಡಾ. ಎಚ್.ನಾಗರಾಜ ಅವರು ಪಿಎಚ್‌ಡಿ ವಿದ್ಯಾರ್ಥಿಗಳ ವಿವರವನ್ನು ಓದಿದರು. ಆಡಳಿತ ಕುಲಸಚಿವ ಡಾ. ಕೆ.ಟಿ.ಹನುಮಂತಪ್ಪ ಅವರು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಸಾದರಪಡಿಸಿದರು.

ಘಟಿಕೋತ್ಸವ ಪರ, ವಿರೋಧ ಪ್ರತಿಕ್ರಿಯೆ
ಯೂಟ್ಯೂಬ್ ಚಾನಲ್ ಮೂಲಕ ಆನ್‌ಲೈನ್ ವೇದಿಕೆಯಲ್ಲಿ ಘಟಿಕೋತ್ಸವ ಆರಂಭವಾಗುತ್ತಿದ್ದಂತೆ, ಆಫ್‌ಲೈನ್ ಘಟಿಕೋತ್ಸವ ಆಯೋಜಿಸದ್ದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು ನೂತನ ಶಿಕ್ಷಣ ಅಳವಡಿಸಿಕೊಂಡ ಹಾಗೂ ಡಿಜಿಟಿಲ್ ವೇದಿಕೆ ಅಳವಡಿಸುವ ಮೂಲಕ ವಿಶ್ವವಿದ್ಯಾಲಯ ನವಯುಗದ ತಂತ್ರಜ್ಞಾನ ಅಳವಡಿಸಿಕೊಂಡಿದೆ ಎಂದರು.

ಕೆಲವರು ಅಂತಿಮ ವರ್ಷದ ಫಲಿತಾಂಶ ಎಂದು ಕೊಡುತ್ತೀರಿ ಎಂದು ಕೇಳಿದರು. ಮಧ್ಯಪ್ರಾಚ್ಯದಿಂದ ಸಂದೇಶ ಕಳುಹಿಸಿದ ವಿದ್ಯಾರ್ಥಿನಿಯೊಬ್ಬರು, ‘2018ರಿಂದ ಪದವಿ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇನೆ. ಈಗ ಸಿಕ್ಕಿರುವುದು ಸಂತಸದ ಜತೆಗೆ ವಿಶ್ವವಿದ್ಯಾಲಯ ನನ್ನ ಉದ್ಯೋಗ ಉಳಿಸಿತು. ಪ್ರಮಾಣಪತ್ರ ಎಂದು ಸಿಗುತ್ತದೆ? ಪಡೆಯುವುದು ಹೇಗೆ? ಎಂದು ಕೇಳಿದರು. ಉಳಿದಂತೆ ಪದವಿ, ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.