ADVERTISEMENT

ಸಿದ್ಧೇಶ್ವರ ಸ್ವಾಮೀಜಿ ಯುಗಾದಿ ಮಹೋತ್ಸವ 19ರಿಂದ

ಮಾ. 25ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು, 26ರಂದು ಬಯಲು ಗಣಕುಸ್ತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 14:31 IST
Last Updated 10 ಮಾರ್ಚ್ 2020, 14:31 IST
ಸಿದ್ಧೇಶ್ವರ ಸ್ವಾಮೀಜಿ
ಸಿದ್ಧೇಶ್ವರ ಸ್ವಾಮೀಜಿ   

ಹುಬ್ಬಳ್ಳಿ: ಯುಗಾದಿ ಮಹೋತ್ಸವ ಮತ್ತು ರಥೋತ್ಸವದ ಅಂಗವಾಗಿ ಉಣಕಲ್‌ನಲ್ಲಿರುವ ಸಿದ್ದೇಶ್ವರ ಸ್ವಾಮೀಜಿಯ ದೇವಸ್ಥಾನದಲ್ಲಿ ಮಾ. 19ರಿಂದ 25ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಸಿದ್ಧೇಶ್ವರ ಸ್ವಾಮೀಜಿ ಹೊಸಮಠದ ಟ್ರಸ್ಟ್‌ ಸಮಿತಿಯ ಪ್ರಮುಖರಾದ ರಾಜಣ್ಣ ಕೊರವಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಮಾ. 18ರಂದು ರಾತ್ರಿ 10 ಗಂಟೆಗೆ ಚಲವಾದಿ ಓಣಿಯ ಸಿದ್ದೇಶ್ವರ ಭಜನಾ ಮಂಡಳಿಯಿಂದ ಮಹಾ ಜಾಗರಣೆ ಪ್ರಾರಂಭವಾಗಲಿದ್ದು, 19ರಿಂದ ಮುಖ್ಯ ಕಾರ್ಯಕ್ರಮಗಳು ಶುರುವಾಗಲಿವೆ. ಅಂದು ಬೆಳಿಗ್ಗೆ ಸ್ವಾಮೀಜಿಯ ಗದ್ದುಗೆಗೆ ಮಹಾ ರುದ್ರಾಭಿಷೇಕದ ಜೊತೆ ಶಿವನಾಮ ಸಪ್ತಾಹ ಜರುಗಲಿವೆ’ ಎಂದು ತಿಳಿಸಿದರು.

ನಿತ್ಯ ಸಂಜೆ 7 ಗಂಟೆಗೆ ಮಣಕವಾಡ ಮಹಾಮಠದ ಗುರು ಅನ್ನದಾನೇಶ್ವರ ದೇವಮಂದಿರದ ಅಭಿನವ ಮೃತ್ಯುಂಜಯ ಸ್ವಾಮೀಜಿ ಪ್ರವಚನ ನೀಡಲಿದ್ದು ಪ್ರತಿದಿನ ಒಬ್ಬ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ADVERTISEMENT

19ರಂದು ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಸ್ವಾಮೀಜಿ, ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ (ಮಾ. 20), ಹುಬ್ಬಳ್ಳಿ ಎರಡೆತ್ತಿನಮಠದ ಸಿದ್ಧಲಿಂಗ ಸ್ವಾಮೀಜಿ (21), ಬಾಗಲಕೋಟೆ ಜಿಲ್ಲೆಯ ಚಿತ್ತರಗಿ ವಿಜಯ ಮಹಾಂತೇಶ್ವರ ತೀರ್ಥ ಶಿರೂರ ಮಠದ ಬಸವಲಿಂಗ ಸ್ವಾಮೀಜಿ (22), ಮೂರುಸಾವಿರ ಮಠದ ಗುರಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (23) ಮತ್ತು ಬೆಳಗಾವಿ ಜಿಲ್ಲೆಯ ನಿಷ್ಕಲಮಂಟಪದ ತೋಂಟದಾರ್ಯ ಶಾಖಾಮಠದ ನಿಜಗುಣಾನಂದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಟ್ರಸ್ಟ್‌ ಸಮಿತಿ ಅಧ್ಯಕ್ಷ ಮೂರುಸಾವಿರಪ್ಪ ಕೊರವಿ ಮಾತನಾಡಿ ‘ಮಾ. 26ರಂದು ಸಂಜೆ 4.30ಕ್ಕೆ ಉಣಕಲ್‌ ಕ್ರಾಸ್‌ನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬಯಲುಗಣ ಕುಸ್ತಿ ಸ್ಪರ್ಧೆಗಳು, 25ರಂದು ಸಂಜೆ 5.30ಕ್ಕೆ ಚಂದ್ರಮಾನ ಯುಗಾದಿಯ ದಿನ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಜರುಗಲಿವೆ. ಅಂದು ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜೆ ನಡೆಯಲಿವೆ. ಎಲ್ಲ ಭಕ್ತರಿಗೂ ಪ್ರಸಾದದ ವ್ಯವಸ್ಥೆ ನಡೆಯಲಿದೆ’ ಎಂದರು.

ಟ್ರಸ್ಟ್‌ ಸಮಿತಿಯ ಪ್ರಮುಖರಾದ ರಾಮಪ್ಪ ಪದ್ಮಣ್ಣವರ, ಶಿವಣ್ಣ ಶಿರಗುಪ್ಪಿ, ಅಪ್ಪಣ್ಣ ನಾಡಿಗೇರ, ಎಸ್‌.ಐ. ನೇಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.