ADVERTISEMENT

ಅಂತಿಮಯಾತ್ರೆ ನೀಡಿದ ಒಗ್ಗಟ್ಟಿನ ಸಂದೇಶ: ಸಿ.ಎಸ್‌. ಹವಲ್ದಾರ

ಸಿಡಿಎಸ್‌ ಬಿಪಿನ್ ರಾವತ್‌ ಅವರಿಗೆ ಹುಬ್ಬಳ್ಳಿಯಲ್ಲಿ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 16:07 IST
Last Updated 10 ಡಿಸೆಂಬರ್ 2021, 16:07 IST
ಸಿ.ಎಸ್‌. ಹವಲ್ದಾರ
ಸಿ.ಎಸ್‌. ಹವಲ್ದಾರ   

ಹುಬ್ಬಳ್ಳಿ: ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್ ಅವರ ಮೃತದೇಹದ ಅಂತಿಮ ಯಾತ್ರೆಯ ಸಮಯದಲ್ಲಿ ದೇಶದ ಜನ ತೋರಿದ ಒಗ್ಗಟ್ಟು ಜಾಗತಿಕ ಮಟ್ಟದಲ್ಲಿ ಅನನ್ಯ ಸಂದೇಶ ರವಾನಿಸಿದೆ ಎಂದು ಹುಬ್ಬಳ್ಳಿಯ ನಿವೃತ್ತ ಏರ್‌ ಕಮಾಂಡರ್ ಸಿ.ಎಸ್‌. ಹವಲ್ದಾರ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ದೇಶದ ಮೊದಲ ಸಿಡಿಎಸ್‌ ಆಗಿ ಕೇಂದ್ರ ಮಂತ್ರಿಮಂಡಲ ಹಾಗೂ ಸುರಕ್ಷಾ ಪಡೆಗಳ ಕೊಂಡಿಯಾಗಿದ್ದರಲ್ಲದೇ, ರಾವತ್‌ ದೇಶರಕ್ಷಣೆ ವಿಷಯ, ಸಾಮರ್ಥ್ಯ, ಬೆಳವಣಿಗೆ, ನವೀಕರಣ ಸೇರಿದಂತೆ ಅನೇಕ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆಗಾರಿಕೆ ಅವರದ್ದಾಗಿತ್ತು. ದೇಶಿ ಉತ್ಪಾದನೆಗೆ ಒತ್ತು ನೀಡಿ ಭಾರತ ಆತ್ಮನಿರ್ಭರದತ್ತ ಸಾಗುವ ಕ್ರಮಗಳ ಬಗ್ಗೆ ಮುತುವರ್ಜಿ ವಹಿಸಿದ್ದರು’ ಎಂದರು.

‘ದೇಶ ರಕ್ಷಣೆಗೆ ಕಂಕಣಬದ್ಧರಾಗಿದ್ದ ಬಿಪಿನ್ ರಾವತ್‌ ಅವರ ಮೃತದೇಹದ ಅಂತಿಮ ಯಾತ್ರೆ ತಮಿಳುನಾಡಿನ ಕೂನೂರು ಪಟ್ಟಣದಿಂದ ಹೊರಟಾಗ ದೇಶದಾದ್ಯಂತ ಜನ ತೋರಿದ ಒಗ್ಗಟ್ಟು ಅಸಾಧಾರಣವಾದದ್ದು. ಸೇನಾನಿಗಳು ಜೊತೆಗಿದ್ದು ಜಾತಿ, ಮತ, ಪಂಥ, ಧರ್ಮ ಎಲ್ಲವನ್ನೂ ಮರೆತು ದೇಶ ಒಂದು; ಅದೇ ಮೊದಲು ಎನ್ನುವ ಸಂದೇಶ ಜನ ನೀಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ನಿಸ್ವಾರ್ಥ ಸೇವೆ, ದೇಶದ ಭವಿಷ್ಯದ ಚಿಂತನೆ, ಆಂತರಿಕ ಸುರಕ್ಷತೆ ಬಗ್ಗೆ ಚರ್ಚೆಯಾಗುತ್ತಿರುವ ಸಮಯದಲ್ಲಿ ಈಗ ತೋರಿದ ಒಗ್ಗಟ್ಟು ದೇಶದ ಶಕ್ತಿಯನ್ನೂ ಸಾಬೀತು ಮಾಡಿದೆ. ಜನರಲ್‌ ರಾವತ್‌ ಅವರು ದೇಶ ಹಾಗೂ ಸುರಕ್ಷತೆ ಬಗ್ಗೆ ಯಾವ ಅಪೇಕ್ಷೆ ಇಟ್ಟುಕೊಂಡಿದ್ದರೊ; ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಮುಂದಿನ ಸಿಡಿಎಸ್‌ ಮೇಲಿದೆ’ ಎಂದಿದ್ದಾರೆ.

ಶ್ರದ್ಧಾಂಜಲಿ: ಬಿಪಿನ್‌ ರಾವತ್‌ ಹಾಗೂ ಇತರ 12 ಜನರ ಆತ್ಮಕ್ಕೆ ಶಾಂತಿ ಕೋರಿ ಶುಕ್ರವಾರ ಉತ್ತರ ಕರ್ನಾಟಕ ಸಂಘ ಸಭಾಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಿ.ಸಿ. ಕಾಲೇಜಿನ ಎನ್‌ಸಿಸಿ ಕೆಡೆಟ್‌ ಮತ್ತು ವಿದ್ಯಾರ್ಥಿಗಳು ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ಕೆಎಲ್‌ಇ ಆಜೀವ ಸದಸ್ಯರು, ಪ್ರಾಚಾರ್ಯ ಡಾ. ಎಲ್‌.ಡಿ. ಹೊರಕೇರಿ, ಪಿಯು ಕಾಲೇಜಿನ ಪ್ರಾಚಾರ್ಯ ವಿ.ಆರ್‌. ವಾಘಮೋಡೆ, ಎನ್‌ಸಿಸಿಯ ಕ್ಯಾಪ್ಟನ್‌ ಪ್ರಭಾಕರನ್‌ ಟಿ. ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.