ADVERTISEMENT

ಧಾರವಾಡ: ಮುಸ್ಲಿಂ ಸಮುದಾಯದವರ ಅಂಗಡಿಗಳ ಧ್ವಂಸ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 19:54 IST
Last Updated 9 ಏಪ್ರಿಲ್ 2022, 19:54 IST
   

ಧಾರವಾಡ: ಇಲ್ಲಿನ ನುಗ್ಗಿಕೇರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಮುಸ್ಲಿಮರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ಶನಿವಾರ ಧ್ವಂಸ ಮಾಡಿದರು.ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗುಂಪು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ದೇವಸ್ಥಾನದ ಆವರಣದಲ್ಲಿರುವ ಹಿಂದೂಯೇತರ ಅಂಗಡಿಗಳನ್ನು ತೆರವುಗೊಳಿಸುವಂತೆ ಹದಿನೈದು ದಿನಗಳ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರು ದೇವಸ್ಥಾನದ ಪರ್ಯಾಯಸ್ಥರಿಗೆ ಎಚ್ಚರಿಕೆ ಪತ್ರ ನೀಡಿದ್ದರು. ಶನಿವಾರ ಬಂದ 8ರಿಂದ 10 ಜನರ ಗುಂಪು ಅಂಗಡಿಗಳಿಗೆ ನುಗ್ಗಿ ಹಣ್ಣು, ಕಾಯಿ, ಕಲ್ಲಂಗಡಿ ಹಣ್ಣುಗಳನ್ನು ಬೀದಿಗೆ ಚೆಲ್ಲಿ ದ್ವಂಸಗೊಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ವ್ಯಾಪಾರಿ ನಬಿಸಾಬ್, ‘ನೋಡನೋಡುತ್ತಿದ್ದಂತೆ ಎಲ್ಲವನ್ನೂ ಒಡೆಯುತ್ತಾ, ಬೀದಿಗೆ ಚೆಲ್ಲುತ್ತಾ ಬಂದರು. ನಾನೊಬ್ಬನೇ ಇದ್ದೆ. ಅಂಗಡಿ, ವಸ್ತುಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ 6 ಕ್ವಿಂಟಾಲ್ ಕಲ್ಲಂಗಡಿ ಖರೀದಿಸಿದ್ದೆ. ಅದರಲ್ಲಿ ಒಂದು ಕ್ವಿಂಟಾಲ್ ಮಾತ್ರ ಮಾರಾಟವಾಗಿತ್ತು. ಕಳೆದ 15 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದೇನೆ. ಈಗ ಮುಸ್ಲಿಮರಿಗೆ ಅಂಗಡಿ ಹಾಕಬೇಡಿ ಎಂದು ಹೇಳುತ್ತಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಪ್ರಕರಣ ಕುರಿತು ಪ್ರತಿಕ್ರಿಯಸಿದ ಪರ್ಯಾಯಸ್ಥ ನರಸಿಂಹಸ್ವಾಮಿ ದೇಸಾಯಿ, ‘ಇಲ್ಲಿಬಡ ಕುಟುಂಬಗಳಿಗೆ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದೆ. ಇದರಲ್ಲಿ ಶೇ 99ರಷ್ಟು ಜನ ಹಿಂದೂಗಳೇ ಇದ್ದಾರೆ. ಘಟನೆ ಕುರಿತು ಇತರ ಪರ್ಯಾಯಸ್ಥರ ಸಭೆ ಸೇರಿ ತೀರ್ಮಾನತೆಗೆದುಕೊಳ್ಳುತ್ತೇವೆ’ ಎಂದರು.ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.