ADVERTISEMENT

ಮೈತ್ರಿ ಸರ್ಕಾರದಿಂದ ಸಂವಿಧಾನ ಉಲ್ಲಂಘನೆ: ಜೋಶಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:32 IST
Last Updated 20 ಜುಲೈ 2019, 14:32 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ಹುಬ್ಬಳ್ಳಿ: ‘ರಾಜ್ಯದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವು ವಿಶ್ವಾಸಮತ ಸಾಬೀತುಪಡಿಸದೆ, ಪ್ರತಿ ಹಂತದಲ್ಲೂ ಸಂವಿಧಾನವನ್ನು ಉಲ್ಲಂಘಿಸುತ್ತಿದೆ. ಬಿಜೆಪಿ ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವ ಮೂಲಕ, ಅದರ ಮೌಲ್ಯಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತಿಗಾಗಿ ಬರೊಬ್ಬರಿ ಐದು ದಿನ ತೆಗೆದುಕೊಳ್ಳುವ ಮೂಲಕ, ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಸ್ಪೀಕರ್ ಕೂಡ ಮೈತ್ರಿ ಸರ್ಕಾರದ ಆಣತಿಯಂತೆ ವರ್ತಿಸುವ ಮೂಲಕ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ’ ಎಂದರು.

‘ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು ನೀಡಿದ ಗಡುವನ್ನು ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿರುವ ಅವರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಘೋಷಣೆ ಕೂಗುತ್ತಿರುವುದು ಖಂಡನೀಯ. ಇನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಹೇಳಿದರು.

ADVERTISEMENT

ದೂರು ಕೊಡಬೇಕಿತ್ತು:

‘ಶಾಸಕರ ಖರೀದಿಗಾಗಿ ಬಿಜೆಪಿಯರು ದುಡ್ಡು ತೆಗೆದುಕೊಂಡು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎನ್ನುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು, ಆಗಲೇ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ಕೊಡಬೇಕಿತ್ತು. ಆದರೆ, ಹಾಗೆ ಮಾಡದೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.