ADVERTISEMENT

ರಾಜ್ಯಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿ ನ.10ರಿಂದ

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 4:58 IST
Last Updated 12 ಅಕ್ಟೋಬರ್ 2022, 4:58 IST

ಧಾರವಾಡ: ‘ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ14ರಿಂದ 17 ವರ್ಷದ ಬಾಲಕ ಹಾಗೂ ಬಾಲಕಿಯರ ರಾಜ್ಯಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿಯನ್ನು ನ. 10 ಹಾಗೂ 11ರಂದು ಆಯೋಜಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕ್ರೀಡಾಕೂಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ‘ಕ್ರೀಡಾಕೂಟದಲ್ಲಿ 10 ಜಿಲ್ಲೆಗಳಿಂದ 140 ಬಾಲಕರು ಹಾಗೂ 220 ಬಾಲಕಿಯರು ಭಾಗವಹಿಸಲಿದ್ದಾರೆ. ಜಿಮ್ನಾಸ್ಟಿಕ್‌ ತಂಡಗಳ ವ್ಯವಸ್ಥಾಪಕರು, ತರಬೇತುದಾರರು ಹಾಗೂ ದೈಹಿಕ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಒಟ್ಟು 390 ಜನ ಜಿಮ್ನಾಸ್ಟಿಕ್ ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

‘ಭಾಗವಹಿಸುವ ಬಾಲಕಿಯರಿಗೆ ಧಾರವಾಡ ಕಿಲ್ಲಾ ಬಳಿಯ ಕೆ.ಎನ್.ಕೆ ಬಾಲಿಕಾ ಪ್ರೌಢಶಾಲೆ, ಕರ್ನಾಟಕ ಪ್ರೌಢಶಾಲೆ, ಮರಾಠಾ ಕಾಲೋನಿಯ ಮಲ್ಲಸಜ್ಜನ ಪ್ರೌಢಶಾಲೆ, ಭಾರತ ಪ್ರೌಢಶಾಲೆ ಹಾಗೂ ಬಾಲಕರಿಗೆ ಮರಾಠಾ ಕಾಲೊನಿಯ ಬುದ್ಧ ರಕ್ಕಿತ ಪ್ರೌಢಶಾಲೆ, ವಿದ್ಯಾರಣ್ಯ ಪ್ರೌಢಶಾಲೆ, ಆರ್‌ಎಲ್‌ಎಸ್ ಪ್ರೌಢಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಬಾಸ್ಕೇಟ್ ಬಾಲ್ ಪಂದ್ಯಾವಳಿ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 14 ಮತ್ತು 17 ವಯೋಮಿತಿಯ ಬಾಲಕ ಹಾಗೂ ಬಾಲಕಿಯರಿಗಾಗಿ ಬೆಳಗಾವಿ ವಿಭಾಗ ಮಟ್ಟದ ಬಾಸ್ಕೇಟ್ ಬಾಲ್ ಪಂದ್ಯಾವಳಿಯನ್ನು ಅ. 21 ಹಾಗೂ 22ರಂದು ಆಯೋಜಿಸಲಾಗಿದೆ.ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ನೋಂದಣಿಗೆ ಅ. 20 ಕೊನೆಯ ದಿನ ಎಂದು ತಿಳಿಸಿದರು.

‘ವಿಭಾಗ ಮಟ್ಟದ ಬಾಸ್ಕೇಟ್‌ಬಾಲ್ ಪಂದ್ಯಾವಳಿಯಲ್ಲಿ ಏಳು ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಒಟ್ಟು 98 ಕ್ರೀಡಾಪಟುಗಳು ಸೇರಿದಂತೆ ಒಟ್ಟು 122 ಜನ ಇದರಲ್ಲಿ ಪಾಲ್ಗೊಳ್ಳಲಿದ್ಧಾರೆ. ಕ್ರೀಡಾಕೂಟಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ಮಾಡಿಕೊಳ್ಳಬೇಕು.ಕ್ರೀಡಾಪಟುಗಳಿಗೆ ಊಟ, ವಸತಿ, ಕುಡಿಯುವ ನೀರು, ತುರ್ತು ಸಂದರ್ಭದ ಚಿಕಿತ್ಸೆಗೆ ಅಗತ್ಯವಿರುವ ಔಷಧ, ಆರೋಗ್ಯ ಸಿಬ್ಬಂದಿ ಲಭ್ಯತೆ ಕುರಿತು ಅಗತ್ಯ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಕೆ.ಜಿ.ತಲಬಕ್ಕನವರ, ಬಾಲ ಮಾರುತಿ ಜಿಮ್ನಾಸ್ಟಿಕ್ ಸಂಸ್ಥೆಯ ವಿ.ಜಿ.ಮೂರ್ತುಗುಡ್ಡೆ, ದೈಹಿಕ ಶಿಕ್ಷಕರಾದ ಬಿ.ಜಿ.ತೊಗರಿ, ಎಸ್.ಬಿ.ಬಸಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.