ADVERTISEMENT

ಕಡಿಮೆ ಅಂಕ; ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಮೇ 2022, 3:17 IST
Last Updated 19 ಮೇ 2022, 3:17 IST

ಹುಬ್ಬಳ್ಳಿ: ಪಿಯುಸಿ ಪ್ರಥಮ ವರ್ಷದ ಅಂತಿಮ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಮಂಗಳವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇಲ್ಲಿನ ಕಾರವಾರ ರಸ್ತೆಯ ಪೊಲೀಸ್‌ ಗೃಹ ನಿವಾಸಿ ಕಾವ್ಯಾ ಮಲ್ಲಪ್ಪ ಬಾದಾಮಿ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದ ಅವಳು, ಖಾಸಗಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಳು. ಅಲ್ಲಿ ಕಡಿಮೆ ಅಂಕ ಬಂದಿದೆಯೆಂದು ಪಾಲಕರು ಬೇರೊಂದು ಕಾಲೇಜಿಗೆ ಸೇರಿಸಿದ್ದರು. ಅಲ್ಲಿಯ ವಾತಾವರಣ ಸರಿಯಿಲ್ಲ ಎಂದು ಮೊದಲಿನ ಕಾಲೇಜಿಗೇ ಸೇರಿಸಲು ಒತ್ತಾಯ ಮಾಡುತ್ತಿದ್ದಳು. ಅಲ್ಲದೆ, ಆರೋಗ್ಯದಲ್ಲೂ ಸಮಸ್ಯೆ ಅನುಭವಿಸುತ್ತಿದ್ದ ಅವಳು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಇನ್‌ಸ್ಪೆಕ್ಟರ್‌ ರವಿಚಂದ್ರನ್‌ ಬಡಾಫಕ್ಕೀರಪ್ಪನವರ ತಿಳಿಸಿದರು.

ADVERTISEMENT

₹50 ಸಾವಿರ ವಂಚನೆ: ಗೋಕುಲ ರಸ್ತೆಯ ವಾಸವಿ ನಗರದ ಛಾಯಾಗ್ರಾಹಕ ಅರ್ಜುನ ಮೇತ್ರಾಣಿ ಅವರ ಕ್ರೆಡಿಟ್‌ ಕಾರ್ಡ್‌ನಿಂದ ವಂಚಕರು ಆನ್‌ಲೈನ್‌ ಮೂಲಕ ₹50ಸಾವಿರ ವರ್ಗಾಯಿಸಿಕೊಂಡಿದ್ದಾರೆ.

ಅರ್ಜುನ ಅವರ ಗಮನಕ್ಕೆ ಬರದೆ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗಿತ್ತು. ಬ್ಯಾಂಕ್‌ನಿಂದಲೇ ಹಣ ಕಡಿತವಾಗಿದೆ ಎಂದು ಸ್ವಲ್ಪ ದಿನ ಸುಮ್ಮನಿದ್ದ ಅವರು, ನಂತರ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದಾರೆ. ಆಗ ಒನ್‌ ಮೊಬಿವಿಕ್‌ ಸಿಸ್ಟಮ್‌ ಪ್ರೈ. ಕಂಪನಿಗೆ ಹಣ ವರ್ಗಾವಣೆಯಾಗಿದ್ದು ತಿಳಿದು ಬಂದಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.