ಹುಬ್ಬಳ್ಳಿ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಅವರನ್ನೊಳಗೊಂಡ ‘ಪ್ರೈಡ್ ಆಫ್ ಇಂಡಿಯಾ’ ತಂಡವು 48.3 ಕಿ.ಮೀ ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷದಲ್ಲಿ ಈಜಿದೆ.
ತಂಡದಲ್ಲಿ ಮುರುಗೇಶ ಚನ್ನಣ್ಣವರ ಜತೆ ಹುಬ್ಬಳ್ಳಿಯ ಕೆಎಂಸಿ–ಆರ್‌ಐನ ವೈದ್ಯಕೀಯ ವಿದ್ಯಾರ್ಥಿ ಅಮನ್ ಶಾನಭಾಗ, ಹರಿಯಾಣದ ಐಎಎಸ್ ಅಧಿಕಾರಿ ದೀಪಕ್ ಬಾಬುಲಾಲ್ ಕರ್ವ, ರಾಜಬೀರ್, ಆಂಧ್ರಪ್ರದೇಶದ ಅಂಗವಿಕಲ ಈಜುಪಟು ಗಣೇಶ್ ಬಾಳಗ, ಮುಂಬೈನ ಬಿಬಿಎ ವಿದ್ಯಾರ್ಥಿ ಮಾನವ ಮೋರೆ ಇದ್ದರು.
ಚಾನಲ್ ಸ್ವಿಮ್ಮಿಂಗ್ ಅಸೋಸಿಯೇಷನ್ (ಸಿಎಸ್‌ಎ) ನಿಯಮದಂತೆ ಜೂನ್ 16ರಂದು ಬೆಳಗಿನ ಜಾವ 2.15ಕ್ಕೆ ಇಂಗ್ಲೆಂಡ್ ಸಾಂಫೈರ್ ಹೋಯ್ ದಡದಿಂದ ಆರಂಭವಾದ ಸ್ಪರ್ಧೆ ಮಧ್ಯಾಹ್ನ 3.52ಕ್ಕೆ ಫ್ರಾನ್ಸ್‌ನ ವಿಸ್ಸಂಟ್ ದಡದಲ್ಲಿ ಕೊನೆಗೊಂಡಿತು. ಅರ್ಜುನ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಕರ್ಮಾಕರ ತಂಡದ ಮಾರ್ಗದರ್ಶಕರಾಗಿದ್ದರು.
‘ಸ್ಪರ್ಧೆಯ ಸಮಯದಲ್ಲಿ 13ರಿಂದ 16 ಡಿಗ್ರಿಯಷ್ಟು ಚಳಿ ಇತ್ತು. ಅಲ್ಲದೆ, ಅಲೆಗಳ ಏರಿಳಿತವೂ ಹೆಚ್ಚು ಇತ್ತು. ಹೀಗಾಗಿ ಕೆಲವರಿಗೆ ವಾಂತಿ, ತಲೆ ಸುತ್ತುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡಿದವು. ಆದರೂ ನಿಗದಿತ ಗುರಿ ತಲುಪಲು ಸಾಧ್ಯವಾಯಿತು’ ಎಂದು ಮುರುಗೇಶ ಚನ್ನಣ್ಣವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.