ADVERTISEMENT

‘ಸಾವಿರ ಪ್ರಕರಣ ಇತ್ಯರ್ಥ್ಯದ ಗುರಿ‘

ರಾಷ್ಟ್ರೀಯ ಲೋಕ ಅದಾಲತ್‌ ಅಂಗವಾಗಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 15:40 IST
Last Updated 22 ಆಗಸ್ಟ್ 2019, 15:40 IST
ಹುಬ್ಬಳ್ಳಿಯ ತಾಲ್ಲೂಕು ಕೋರ್ಟ್‌ನಲ್ಲಿ ಗುರುವಾರ ಲೋಕ ಅದಾಲತ್‌ ಕುರಿತು ಪೂರ್ವಭಾವಿ ಸಭೆ ಜರುಗಿತು
ಹುಬ್ಬಳ್ಳಿಯ ತಾಲ್ಲೂಕು ಕೋರ್ಟ್‌ನಲ್ಲಿ ಗುರುವಾರ ಲೋಕ ಅದಾಲತ್‌ ಕುರಿತು ಪೂರ್ವಭಾವಿ ಸಭೆ ಜರುಗಿತು   

ಹುಬ್ಬಳ್ಳಿ: ಕಳೆದ ಸಲದ ಲೋಕ ಅದಾಲತ್‌ನಲ್ಲಿ 889 ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸಲಾಗಿತ್ತು. ಈ ವರ್ಷ ಒಂದು ಸಾವಿರ ಪ್ರಕರಣಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎ.ಕೆ. ನಾಗರಾಜಪ್ಪ ಹೇಳಿದರು.

ಸೆ. 14ರಂದು ತಾಲ್ಲೂಕು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಲು ಒತ್ತುಕೊಡಲಾಗುವುದು. ಆದ್ದರಿಂದ ಬ್ಯಾಂಕ್‌, ಹೆಸ್ಕಾಂ, ವಿಮಾ ಸಂಸ್ಥೆಗಳು, ಕಂದಾಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಪರಿಹರಿಸಬಹುದಾದ ಪ್ರಕರಣಗಳ ಪಟ್ಟಿಯನ್ನು ಆದಷ್ಟು ಬೇಗನೆ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದರು.

‘ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ಹಲವು ಬಾರಿ ನೋಟಿಸ್‌ ಜಾರಿಯಾಗಿರುವುದಿಲ್ಲ. ಅರ್ಜಿದಾರರನ್ನು ಸಂಪರ್ಕಿಸಿ ಅವರಿಂದ ಸರಿಯಾದ ವಿಳಾಸ ಪಡೆದು ನೋಟಿಸ್‌ ತಲುಪಿಸಿ. ಗ್ರಾಹಕರೊಂದಿಗೆ ಇರುವ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಲೋಕ ಅದಾಲತ್‌ ಉತ್ತಮ ವೇದಿಕೆ’ ಎಂದರು.

ADVERTISEMENT

ಸಭೆಗೆ ವಿಮಾ ಕಂಪನಿಗಳ ಪ್ರತಿನಿಧಿಗಳು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಎಲ್ಲ ವಿಮಾ ಕಂಪನಿಗಳಿಗೆ ಅದಾಲತ್‌ನಲ್ಲಿ ಪಾಲ್ಗೊಳ್ಳುವಂತೆ ನೋಟಿಸ್‌ ಕಳುಹಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ‘ಅದಾಲತ್‌ನಲ್ಲಿ ಸಂಘದ ವಕೀಲರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರಕರಣ ವಿಲೇವಾರಿಗೆ ನೆರವಾಗಬೇಕು’ ಎಂದರು.

ನ್ಯಾಯಾಧೀಶರಾದ ದೇವೆಂದ್ರಪ್ಪ ಎನ್. ಬಿರಾದಾರ, ಸುಮಂಗಲಾ ಎಸ್ ಬಸವಣ್ಣೂರ, ಗಂಗಾಧರ ಕೆ.ಎನ್, ರವೀಂದ್ರ ಪಲ್ಲೇದ, ಸಂಜಯ ಗುಡಗುಡಿ, ಸುಜಾತ, ಮಾದೇಶ್ ಎನ್, ಶಕುಂತಲಾ ಆರ್, ದೀಪಾ ಮನೀರಕರ, ದೀಪ್ತಿ ನಾಡಗೌಡ, ಅನುರಾಧ, ಎಸ್.ಎಂ.ಚೌಗಲೆ, ಪುಷ್ಪಾ ಜೋಗೋಜಿ, ವಿಶ್ವನಾಥ ಮುಗುತಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಮಹೇಶ ಎಸ್. ಪಾಟೀಲ, ಸರ್ಕಾರಿ ಅಭಿಯೋಜಕ ಪ್ರಕಾಶ್ ಎಸ್ ಸುಂಕದ, ವಕೀಲರ ಸಂಘದ ಕಾರ್ಯದರ್ಶಿ ಗುರು ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.