ADVERTISEMENT

ಆ. 3ರಿಂದ ಉಚಿತ ಆನ್‌ಲೈನ್‌ ಬ್ರಿಡ್ಜ್‌ಕೋರ್ಸ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 7:48 IST
Last Updated 31 ಜುಲೈ 2020, 7:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಕೊಳ್ಳಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ವಿಷಯದ ಬಗ್ಗೆ ತಿಳಿವಳಿಕೆ ಮೂಡಿಸಲು ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್‌. ಪಾಟೀಲ ಪದವಿಪೂರ್ವ ವಿಜ್ಞಾನ ಕಾಲೇಜು ಮತ್ತು ಪ್ರಾರ್ಥನಾ ಎಜುಕೇಷನ್‌ ಸೊಸೈಟಿ ಜಂಟಿಯಾಗಿ ಆ.3ರಿಂದ ಹತ್ತು ದಿನ ಉಚಿತವಾಗಿ ಆನ್‌ಲೈನ್‌ ಬ್ರಿಡ್ಜ್‌ ಕೋರ್ಸ್‌ ಆಯೋಜಿಸಿದೆ.

ಕಾಲೇಜಿನ ಪ್ರಾಚಾರ್ಯ ಎಸ್‌.ಬಿ. ಸಣಗೌಡರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳ ಬಯಸುವ ವಿದ್ಯಾರ್ಥಿಗಳಿಗೆ ಆ ವಿಭಾಗದ ಬಗ್ಗೆ ಸ್ಪಷ್ಟ ಜ್ಞಾನ ಇರುವುದಿಲ್ಲ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಮುಖ್ಯ ಗುರಿಯಾಗಿರಿಸಿಕೊಂಡು ಬ್ರಿಡ್ಜ್‌ ಕೋರ್ಸ್‌ ಆರಂಭಿಸಲಾಗಿದೆ. ನಿತ್ಯ ಬೆಳಿಗ್ಗೆ 8ರಿಂದ 9 ಮತ್ತು 9.30ರಿಂದ 10.30ರ ತನಕ ಎರಡು ತರಗತಿಗಳು ನಡೆಯುತ್ತವೆ. ಪಿಸಿಎಂಬಿ ವಿಷಯಗಳ ಬಗ್ಗೆ ಅನುಭವಿ ಶಿಕ್ಷಕರು ಆನ್‌ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ’ ಎಂದರು.

‘ಬ್ರಿಡ್ಜ್‌ ಕೋರ್ಸ್‌ ತರಬೇತಿ ಪಡೆದವರು ನಮ್ಮ ಕಾಲೇಜಿನಲ್ಲಿಯೇ ಪ್ರವೇಶ ಪಡೆಯಬೇಕು ಎನ್ನುವ ಕಡ್ಡಾಯ ನಿಯಮವೇನಿಲ್ಲ. ಕೊರೊನಾ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಲು ನೆರವಾಗುವ ಉದ್ದೇಶದಿಂದ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಬ್ರಿಡ್ಜ್ ಕೋರ್ಸ್‌ ನೀಡಲಾಗುತ್ತಿತ್ತು’ ಎಂದರು.

ADVERTISEMENT

ಪ್ರಾರ್ಥನಾ ಎಜುಕೇಷನ್‌ ಸೊಸೈಟಿಯ ಕಾರ್ಯದರ್ಶಿ ಶಂಕರ ವಿ. ಕುಂಬಾರ ಹಾಗೂ ಪಾಟೀಲ ಕಾಲೇಜಿನ ಕಚೇರಿ ಅಧೀಕ್ಷಕ ರಾಜಣ್ಣ ಗುಡಿಮನಿ ಮಾತನಾಡಿ ‘ಎಸ್ಸೆಸ್ಸೆಲ್ಸಿಯಲ್ಲಿ ಸಾಧಾರಣ ಫಲಿತಾಂಶ ಪಡೆದ ಮಕ್ಕಳಿಗೂ ನಮ್ಮ ಕಾಲೇಜಿನಲ್ಲಿ ಪ್ರವೇಶ ನೀಡಿದ್ದೇವೆ. ಅವರು ಪಿಯುಸಿಯಲ್ಲಿ ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕೆಲ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಉಚಿತವಾಗಿ ಪ್ರವೇಶ ನೀಡುತ್ತಿದ್ದೇವೆ’ ಎಂದರು.

ಬ್ರಿಡ್ಜ್‌ಕೋರ್ಸ್‌ನಲ್ಲಿ ಪಾಲ್ಗೊಳ್ಳುವ ಆಸಕ್ತ ವಿದ್ಯಾರ್ಥಿಗಳು ಹೆಸರು ನೋಂದಾಯಿಸಲು ಮೊ. 7204593414 ಅಥವಾ 7204593415 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.