ADVERTISEMENT

ಹುಬ್ಬಳ್ಳಿ | ಪಾಲಿಕೆಯ ವ್ಯಾಯಾಮ ಶಾಲೆ ಕಟ್ಟಡ ಶಿಥಿಲ

15ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಾಧ್ಯತೆ: ಕಟ್ಟಡ ತೆರವಿಗೆ ಸ್ಥಳೀಯರ ಮನವಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 5:25 IST
Last Updated 28 ಜುಲೈ 2024, 5:25 IST
ಹಳೇ ಹುಬ್ಬಳ್ಳಿಯ ಚೆನ್ನಪೇಟೆಯಲ್ಲಿನ ನಾರಾಯಣ ಸೋಪಾದಲ್ಲಿ ಶಿಥಿಲವಾಗಿರುವ ಪಾಲಿಕೆಯ ವ್ಯಾಯಾಮ ಶಾಲೆ ಕಟ್ಟಡವನ್ನು ಸ್ಥಳೀಯ ನಿವಾಸಿ ಪರಶುರಾಮ ಕಬಾಡಿ ತೋರಿಸುತ್ತಿರುವುದು
–ಪ್ರಜಾವಾಣಿ ಚಿತ್ರ: ಗುರು ಹಬೀಬ 
ಹಳೇ ಹುಬ್ಬಳ್ಳಿಯ ಚೆನ್ನಪೇಟೆಯಲ್ಲಿನ ನಾರಾಯಣ ಸೋಪಾದಲ್ಲಿ ಶಿಥಿಲವಾಗಿರುವ ಪಾಲಿಕೆಯ ವ್ಯಾಯಾಮ ಶಾಲೆ ಕಟ್ಟಡವನ್ನು ಸ್ಥಳೀಯ ನಿವಾಸಿ ಪರಶುರಾಮ ಕಬಾಡಿ ತೋರಿಸುತ್ತಿರುವುದು –ಪ್ರಜಾವಾಣಿ ಚಿತ್ರ: ಗುರು ಹಬೀಬ    

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಚೆನ್ನಪೇಟೆಯಲ್ಲಿನ ನಾರಾಯಣ ಸೋಪಾದಲ್ಲಿರುವ ಮಹಾನಗರ ಪಾಲಿಕೆಯ ವ್ಯಾಯಾಮ ಶಾಲೆ ಕಟ್ಟಡವು ಸಂಪೂರ್ಣವಾಗಿ ಶಿಥಿಲವಾಗಿದ್ದು, ಇಡೀ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ. 

ಅರವಿಂದ ನಗರದ ಸೇರಿದಂತೆ ಚೆನ್ನಪೇಟೆ, ನಾರಾಯಣ ಸೋಪಾ, ಪಾಂಡುರಂಗ ಕಾಲೊನಿಯ ಯುವಕರ ವ್ಯಾಯಾಮಕ್ಕೆ ಅನುಕೂಲವಾಗಲಿ ಎಂದು 40 ವರ್ಷಗಳ ಹಿಂದೆ 50X50 ಅಳತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ವ್ಯಾಯಾಮ ಶಾಲೆ ಕಟ್ಟಡ  ನಿರ್ಮಿಸಲಾಗಿತ್ತು. ಕಟ್ಟಡವು ಕ್ರಮೇಣ ಶಿಥಿಲ ಹಂತ ತಲುಪಿದಂತೆ, ನಿರ್ವಹಣೆ ಇಲ್ಲದೇ ಪಾಳು ಬಿದ್ದಿತು. ಕಟ್ಟಡದ ನಾಲ್ಕೂ ಪಿಲ್ಲರ್‌ಗಳ ತಳಭಾಗದ ಸಿಮೆಂಟ್‌ ಕಳಚಿ ಬಿದ್ದಿದ್ದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಹೊರಗೆ ಬಂದಿವೆ. ಕಟ್ಟಡವು ಬೀಳುವ ಸ್ಥಿತಿಯಲ್ಲಿದೆ. 

ತ್ಯಾಜ್ಯದ ಗುಂಡಿ:

ADVERTISEMENT

ವ್ಯಾಯಾಮ ಶಾಲೆಯಲ್ಲಿ ಯಾವುದೇ ಪರಿಕರಗಳಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಬಾಗಿಲು ಮುಚ್ಚಿದೆ. ಇದೀಗ ಇಡೀ ಕಟ್ಟಡವು ಹಳೆ ಕಟ್ಟಡಗಳ ಅವಶೇಷ, ಸುತ್ತಮುತ್ತಲಿನ ಮನೆಗಳ ತ್ಯಾಜ್ಯ ಹಾಗೂ ಶೌಚ ಗುಂಡಿಯಾಗಿ ಪರಿವರ್ತನೆಯಾಗಿದೆ.

‘ವ್ಯಾಯಾಮ ಶಾಲೆಯು ಹಿಂದೆ ಚೆನ್ನಾಗಿತ್ತು. ಸುತ್ತಮುತ್ತಲಿನ ಭಾಗದ 20ಕ್ಕೂ ಹೆಚ್ಚು ಯುವಕರು ನಿತ್ಯ ಬೆಳಿಗ್ಗೆ, ಸಂಜೆ ಇಲ್ಲಿ ವ್ಯಾಯಾಮ ಮಾಡುತ್ತಿದ್ದರು. ಸರಿಯಾದ ನಿರ್ವಹಣೆ ಇಲ್ಲದೆ ಶಾಲೆ ಬಾಗಿಲು ಮುಚ್ಚಿತು. ಕ್ರಮೇಣ ವ್ಯಾಯಾಮದ ಕಬ್ಬಿಣದ ಪರಿಕರಗಳು ಕಳವಾದವು. ಹುಡುಗರು ಇಲ್ಲಿಗೆ ಬರುವುದನ್ನೇ ನಿಲ್ಲಿಸಿದರು. ಇದರಿಂದಾಗಿ ಇಡೀ ಕಟ್ಟಡವು ಪಾಳು ಬಿದ್ದಿತು. ಇವಾಗ ಕಟ್ಟಡ ಪಿಲ್ಲರ್‌ಗಳ ತಳಭಾಗವು ಮಳೆ ನೀರು, ಸುತ್ತಮುತ್ತಲಿನ ಮನೆಗಳ ಶೌಚ ನೀರಿನಿಂದ ಸಂಪೂರ್ಣವಾಗಿ ಹಾಳಾಗಿದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಯಾವ ಸಮಯದಲ್ಲಾದರೂ ಬೀಳುವ ಸ್ಥಿತಿಯಿದೆ‘ ಎಂದು ನಾರಾಯಣ ಸೋಪಾದ ನಿವಾಸಿ ಸಂಜಯ್‌ ಬೂತೆ ಆತಂಕ ವ್ಯಕ್ತಪಡಿಸಿದರು. 

15ಕ್ಕೂ ಅಧಿಕ ಮನೆಗಳಿಗೆ ಹಾನಿ ಸಾಧ್ಯತೆ:

‘ವ್ಯಾಯಾಮ ಶಾಲೆಯ ಕಟ್ಟಡವು ಶಿಥಿಲವಾಗಿದ್ದು, ಕಟ್ಟಡವನ್ನು ತೆರವುಗೊಳಿಸಿ, ಇಲ್ಲಿನ ಜನರ ಅನುಕೂಲಕ್ಕಾಗಿ ಕರ್ನಾಟಕ ಒನ್ ಕೇಂದ್ರ, ಅಂಗನವಾಡಿ ಕಟ್ಟಡ ಅಥವಾ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸಿ ಎಂದು ಈಚೆಗೆ ಪಾಲಿಕೆ ಅಧಿಕಾರಿಗಳಲ್ಲಿ ಸ್ಥಳೀಯರು ಮನವಿ ಮಾಡಿದ್ದರು. ಆದರೂ ಪ್ರಯೋಜನವಾಗಿಲ್ಲ‘ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

‘ನಿರಂತರ ಮಳೆಯಿಂದಾಗಿ ಕಟ್ಟಡದ ಇಡೀ ಭಾಗವು ನೀರಿನಿಂದ ನೆನೆದಿದೆ. ಒಂದು ವೇಳೆ ಕುಸಿದು ಬಿದ್ದರೆ, ಕಟ್ಟಡದ ಸುತ್ತಮುತ್ತ ಇರುವ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ ಕಟ್ಟಡದ ಸುತ್ತಲೂ ಮಕ್ಕಳು ಆಟವಾಡುವುದರಿಂದ ಮಕ್ಕಳ ಜೀವಕ್ಕೆ ಹಾನಿಯಾಗುವ ಸಾಧ್ಯತೆಯೂ ಇದೆ‘ ಎಂದು ಕಟ್ಟಡದ ಬಳಿಯ ಮನೆಯೊಂದರ ನಿವಾಸಿ ಪರಶುರಾಮ ಕಬಾಡಿ ಆತಂಕ ವ್ಯಕ್ತಪಡಿಸುತ್ತಾ ಶಿಥಿಲವಾಗಿದ್ದ ಕಟ್ಟಡವನ್ನು ತೋರಿಸಿದರು. 

ಸಂತೋಷ
ಈಶ್ವರ ಉಳ್ಳಾಗಡ್ಡಿ

ವ್ಯಾಯಾಮ ಶಾಲೆ ಕಟ್ಟಡವು ಶೌಚ ತ್ಯಾಜ್ಯದ ಕೇಂದ್ರವಾಗಿದೆ. ಕಟ್ಟಡದ ಸುತ್ತಲೂ ಮಹಿಳೆಯರು ಬಟ್ಟೆ ಪಾತ್ರೆ ತೊಳೆಯುತ್ತಾರೆ. ಹೀಗಾಗಿ ಕಟ್ಟಡದ ತಳಭಾಗವು ಶಿಥಿಲವಾಗಿದೆ. ಬೀಳುವ ಮುನ್ನ ಪಾಲಿಕೆಯವರು ತೆರವುಗೊಳಿಸಬೇಕು. 

–ಸಂತೋಷ ನಾರಾಯಣ ಸೋಪಾ ನಿವಾಸಿ. 

ವ್ಯಾಯಾಮ ಶಾಲೆ ಕಟ್ಟಡ ಶಿಥಿಲವಾಗಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರವುಗೊಳಿಸಲಾಗುವುದು.

–ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.