ADVERTISEMENT

ಹುಬ್ಬಳ್ಳಿಯಲ್ಲಿ ಸ್ಥಳೀಯರ ಕಣ್ಣಿಗೆ ಚಿರತೆ ಪ್ರತ್ಯಕ್ಷ; ಕಾರ್ಯಾಚರಣೆ

ಜನರಲ್ಲಿ ಮುಂದುವರಿದ ಆತಂಕ; ಹೆಚ್ಚುವರಿ ಬೋನ್‌ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:16 IST
Last Updated 21 ಸೆಪ್ಟೆಂಬರ್ 2021, 5:16 IST
ಹುಬ್ಬಳ್ಳಿ ರಾಜನಗರದ ಕೇಂದ್ರೀಯ ವಿದ್ಯಾಲಯದ ಹಳೇ ಕಟ್ಟಡದ ಪಕ್ಕದಲ್ಲಿ ಬೆಳೆದಿರುವ ಹುಲ್ಲು, ಕುರುಚಲು ಗಿಡಗಳನ್ನು ವಿದ್ಯಾಲಯದ ಸಿಬ್ಬಂದಿ ಸೋಮವಾರ ಕಿತ್ತು ಹಾಕಿದರು                  /ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ರಾಜನಗರದ ಕೇಂದ್ರೀಯ ವಿದ್ಯಾಲಯದ ಹಳೇ ಕಟ್ಟಡದ ಪಕ್ಕದಲ್ಲಿ ಬೆಳೆದಿರುವ ಹುಲ್ಲು, ಕುರುಚಲು ಗಿಡಗಳನ್ನು ವಿದ್ಯಾಲಯದ ಸಿಬ್ಬಂದಿ ಸೋಮವಾರ ಕಿತ್ತು ಹಾಕಿದರು                  /ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನೃಪತುಂಗ ಬೆಟ್ಟದ ಬಳಿಯ ಶಿರಡಿನಗರದ ಬಳಿ ಸೋಮವಾರ ಸಂಜೆ ಚಿರತೆ ನೋಡಿರುವುದಾಗಿ ಅಲ್ಲಿನ ನಿವಾಸಿಗಳು ಹೇಳಿದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಜನವಸತಿ ಪ್ರದೇಶದಿಂದ ಅದನ್ನು ದೂರ ಓಡಿಸುವ ಯತ್ನವನ್ನು ತಡರಾತ್ರಿವರೆಗೂ ನಡೆಸಿದ್ದರು.

ಸಂಜೆ 6ರ ವೇಳೆಗೆ ಬೆಟ್ಟದ ತಪ್ಪಲಿನ ಶಿರಡಿ ನಗರದ ನಿವಾಸಿ ಸಾವಿತ್ರಿ ಮುದ್ದೆಬಿಹಾಳ ಅವರು, ಹಂದಿಯನ್ನು ಚಿರತೆ ಎಳೆದುಕೊಂಡು ಹೋಗುತ್ತಿರುವುದು ನೋಡಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಬಂದು ಚಿರತೆ ಓಡಿಸುವ ಯತ್ನ ಮಾಡಿದರು.

‘ಮನೆ ಎದುರು ಕಸಗುಡಿಸಿ ಬೆಂಕಿ ಹಾಕುತ್ತಿರುವಾಗ ಹಂದಿಯನ್ನು ಕಚ್ಚಿಕೊಂಡು ಚಿರತೆ ಹೋಯಿತು. ಏನು ಮಾಡಬೇಕೆಂದು ತಿಳಿಯದೆ ಭಯದಿಂದ ಕೂಗುತ್ತ ಓಡಿಬಂದೆ. ಸುತ್ತಲಿನ ನಿವಾಸಿಗಳೆಲ್ಲ ಒಂದೆಡೆ ಸೇರಿದರು. ಆ ವೇಳೆ ನಾಯಿ ಸಹ ಬೊಗಳುತ್ತಿತ್ತು’ ಎಂದು ಸಾವಿತ್ರಿ ತಿಳಿಸಿದರು.

ADVERTISEMENT

‘ಮನೆ ಎದುರಿಗಿರುವ ಮರದ ಮೇಲೆ ಚಿರತೆ ಇತ್ತು. ಅದು ಮರದ ಮೇಲಿಂದ ಪಕ್ಕದಲ್ಲಿರುವ ಮನೆಯ ಮೇಲೆ ಹಾರಿ ಬೆಟ್ಟಕ್ಕೆ ಹೋಯಿತು’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಶಾಂತಾ ಯಲವಗಿ ಹೇಳಿದರು.

ಧಾರವಾಡ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ ಸ್ಥಳೀಯರಿಂದ ಮಾಹಿತಿ ಪಡೆದು, ತುರ್ತು ಕ್ರಮಕ್ಕೆ ಮುಂದಾದರು. ಜೆಸಿಬಿ, ಬೈಕ್‌ ಹಾಗೂ ಟ್ರ್ಯಾಕ್ಟರ್‌ಗಳನ್ನು ಬೆಟ್ಟದ ಸುತ್ತ ಓಡಿಸಿ ಹಾಗೂ ಪಟಾಕಿ ಸಿಡಿಸಿ ಚಿರತೆಯನ್ನು ಓಡಿಸುವ ಯತ್ನ ಮಾಡಿದರು. ತಡರಾತ್ರಿವರೆಗೂ ಎರಡು ತಂಡಗಳಾಗಿ ಬೆಟ್ಟದ ಸುತ್ತೆಲ್ಲ ಪಟಾಕಿ ಸಿಡಿಸುತ್ತಿದ್ದರು. ಸ್ಥಳೀಯರ ಕಣ್ಣಿಗೆ ಚಿರತೆ ಕಂಡಿದ್ದರಿಂದ ಶಿರಡಿನಗರದ ನಿವಾಸಿಗಳು ಆತಂಕದಲ್ಲಿದ್ದಾರೆ.

ಕುರುಹು ಸಿಕ್ಕಿಲ್ಲ: ಚಿರತೆ ಚಲನವಲನ ಸೆರೆ ಹಿಡಿಯಲು ಬೆಟ್ಟದ ಮೇಲ್ಗಡೆ ಹಾಗೂ ಕೇಂದ್ರೀಯ ವಿದ್ಯಾಲಯದ ಹಿಂಭಾಗದ ಪ್ರದೇಶದಲ್ಲಿ ಅಳವಡಿಸಿರುವ ಟ್ರ್ಯಾಪ್‌ ಕ್ಯಾಮೆರಾದಲ್ಲಿ ಭಾನುವಾರ ರಾತ್ರಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿಲ್ಲ. ಯಾವುದಾರೂ ಪ್ರಾಣಿಗಳು ಸತ್ತಿವೆಯೇ ಅಥವಾ ಚಿರತೆಯ ಹೆಜ್ಜೆ ಗುರುತು ಸಿಗಬಹುದೇ ಎಂದು ಕುರುಚಲು ಪ್ರದೇಶಕ್ಕೆ ತೆರಳಿದ ಸಿಬ್ಬಂದಿಗೂ ಯಾವ ಕುರುಹು ಸಿಕ್ಕಿಲ್ಲ.

ಪತ್ರಕರ್ತ ನಗರದ ಸನಿಹ ಇರುವ ಬೆಟ್ಟದ ತಪ್ಪಲಿನಲ್ಲಿರುವ ನೀರಿನ ಹೊಂಡದ ಬಳಿ ‘ಚಿರತೆಯ ಹೆಜ್ಜೆ ಗುರುತು ಬಿದ್ದಿದೆ’ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ, ಅದು ಚಿರತೆಯ ಹೆಜ್ಜೆ ಗುರುತಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟಪಡಿಸಿದರು.

ರಾಜನಗರದ ಕೇಂದ್ರೀಯ ವಿದ್ಯಾಲಯದ ಹಿಂಭಾಗದಲ್ಲಿ ಸೋಮವಾರ ಹೆಚ್ಚುವರಿಯಾಗಿ ಒಂದು ಬೋನ್‌ ಇಡಲಾಗಿದೆ. ನೃಪತುಂಗ ಬೆಟ್ಟದ ಮೇಲ್ಗಡೆ, ಕೇಂದ್ರೀಯ ವಿದ್ಯಾಲಯದ ಆವರಣ, ಗಂಗೂಬಾಯಿ ಹಾನಗಲ್‌ ಗುರುಕುಲ ಸಂಪರ್ಕಿಸುವ ಬೆಟ್ಟದ ಕೆಳಭಾಗದ ರಸ್ತೆ ಬಳಿ, ಟಿಂಬರ್‌ ಯಾರ್ಡ್‌ ಸನಿಹ ಧಾರವಾಡ, ಕಲಘಟಗಿ ಹಾಗೂ ಗದಗ ಭಾಗಗಳಿಂದ ಬಂದ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ.

ಸಿಬ್ಬಂದಿ ಅನುಮಾನ: ಅಂದಾಜು 150 ಮೀಟರ್‌ ಸುತ್ತಳತೆಯ ಪ್ರದೇಶದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೆಯ ಕಟ್ಟಡದ ಸುತ್ತ ಹುಲ್ಲು, ಕುರುಚಲು ಗಿಡಗಳು ಬೆಳೆದು ನಿಂತಿವೆ. ‘ಏಳೆಂಟು ವರ್ಷಗಳಿಂದ ಕಟ್ಟಡ ಪಾಳು ಬಿದ್ದಿದ್ದು, ಚಿರತೆ ವಾಸಸ್ಥಾನಕ್ಕೆ ಯೋಗ್ಯವಾಗಿದೆ. ಜನರ ಸಂಪರ್ಕವಿಲ್ಲದ ಆ ಜಾಗದಲ್ಲಿ ಚಿರತೆ ನಿಶ್ಚಿಂತೆಯಾಗಿ ಇದ್ದಿರಬಹುದು’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅನುಮಾನ ವ್ಯಕ್ತಪಡಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರೀಯ ವಿದ್ಯಾಲಯದ ಸಿಬ್ಬಂದಿ ಸೋಮವಾರದಿಂದ ಕಟ್ಟಡ ಸುತ್ತ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಕಟ್ಟಡದ ಮುಂಭಾಗ ಹಾಗೂ ಎಡಭಾಗದಲ್ಲಿ ಬೆಳೆದು ನಿಂತಿದ್ದ ಹುಲ್ಲು ತೆಗೆದು, ಕುರುಚಲು ಗಿಡಗಳನ್ನು ತೆರವುಗೊಳಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾಲಯದ ಪ್ರಾಚಾರ್ಯ ರವಿ ರಾಜೇಶ, ‘17.19 ಎಕರೆ ಜಾಗ ಕೇಂದ್ರೀಯ ವಿದ್ಯಾಲಯಕ್ಕೆ ಒಳಪಟ್ಟಿದ್ದು, ಬಹುತೇಕ ಜಾಗದಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ಕಾಡಿನಂತಾಗಿದೆ. ಹಳೆಯ ಕಟ್ಟಡಗಳ ತೆರವಿಗೆ ಖರ್ಚಿನ ಅಂದಾಜು ವೆಚ್ಚದ ವರದಿಯನ್ನು ಕೇಂದ್ರ ಕಚೇರಿಗೆ ಮೂರ್ನಾಲ್ಕು ಬಾರಿ ಸಲ್ಲಿಸಿದ್ದು, ವೆಚ್ಚ ಜಾಸ್ತಿಯೆಂದು ತಿರಸ್ಕೃತವಾಗಿದೆ. ಅನುದಾನವಿಲ್ಲದ ಕಾರಣ ಕಟ್ಟಡ ತೆರವು ಮಾಡಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದು, 17 ಎಕರೆ ಜಾಗ ಸ್ವಚ್ಛ ಮಾಡುವುದು ಸುಲಭದ ಮಾತಲ್ಲ’ ಎಂದರು.

‘ವಾರದ ಹಿಂದೆಯೇ ಚಿರತೆ ಬಂದಿದೆ’: ‘ಚಿರತೆ ಬಂದು ವಾರಕ್ಕಿಂತ ಹೆಚ್ಚಾಗಿದೆ. ಕೇಂದ್ರೀಯ ಶಾಲೆ ಹಿಂಭಾಗದಲ್ಲಿ ನಾಯಿಗಳು ಬೊಗಳುತ್ತಿದ್ದವು. ವಾರದ ಹಿಂದೆ ಕೆಲವು ನಾಯಿಗಳು ಆ ಪ್ರದೇಶದಿಂದ ಬೊಗಳುತ್ತ ನಮ್ಮತ್ತ ಓಡಿ ಬಂದವು. ಮಾರನೇ ದಿನ ಕಪ್ಪು ನಾಯಿಯ ಮೃತ ದೇಹ ಕುರುಚಲು ಪ್ರದೇಶದಲ್ಲಿ ಪತ್ತೆಯಾಯಿತು’ ಎಂದು ಅಲ್ಲಿಯ ಭದ್ರತಾ ಸಿಬ್ಬಂದಿ ಹನುಮಂತಪ್ಪ ಮಡಿವಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.