ADVERTISEMENT

ಕಳ್ಳತನ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 16:27 IST
Last Updated 14 ಆಗಸ್ಟ್ 2021, 16:27 IST

ಹುಬ್ಬಳ್ಳಿ: ಅವಳಿ ನಗರದ ವಿವಿಧ ಮನೆಗಳಲ್ಲಿ ಹಾಗೂ ಹಾವೇರಿಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಬೆಂಡಿಗೇರಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಲ್ಲಿನ ಅರಳಿಕಟ್ಟಿ ಕಾಲೊನಿಯ ದಾವೂದ್‌ ಶೇಖ್‌ ಮತ್ತು ಹಮೀದ್‌ ಬೇಪಾರಿ, ಮಂಟೂರು ರಸ್ತೆ ಹರಿಶ್ಚಂದ್ರ ಕಾಲೊನಿಯ ಮಹಮ್ಮದ್‌ ಹುಸೇನ್‌ ಶೇಖ್‌ ಬಂಧಿತರು. ಧಾರವಾಡದ ವಿದ್ಯಾಗಿರಿ, ಎಪಿಎಂಸಿ ನವನಗರ, ಉಪನಗರ ಮತ್ತು ಹಾವೇರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಆರೋಪ ಇವರ ಮೇಲಿದೆ. ಬಂಧಿತರಿಂದ 35.5 ಗ್ರಾಂ ಚಿನ್ನಾಭರಣ, ಲ್ಯಾಪ್‌ಟಾಪ್‌, 100 ಗ್ರಾಂ ಬೆಳ್ಳಿ ಸರ, ₹7,500 ನಗದು ಮತ್ತು ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಗಳನ್ನು ಬೆಂಡಿಗೇರಿ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿದೆ.

ADVERTISEMENT

ಆರೋಪಿ ಪರಾರಿ: ಪ್ರಕರಣವೊಂದರಲ್ಲಿ ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗಿದ್ದ ಮೊರಾರ್ಜಿ ನಗರದ ಉದ್ಯಮಿ ಜಾಯ್ಸನ್‌ ಎಂ. ಸೆಬಾಸ್ಟಿಯನ್‌ ಎಂಬ ಆರೋಪಿ ನ್ಯಾಯಾಲಯದಿಂದ ಶುಕ್ರವಾರ ಪರಾರಿಯಾಗಿದ್ದಾನೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿತ್ತು. ಸರ್ಕಾರಿ ಅಧಿಕಾರಿ ಗಂಗಪ್ಪಗೌಡ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರಿಂದ ದಾಖಲೆಗಳನ್ನು ತೆಗೆದುಕೊಳ್ಳಲು ಗಂಗಪ್ಪಗೌಡ ನ್ಯಾಯಾಲಯದ ಕಚೇರಿಗೆ ಕರೆದೊಯ್ಯವಾಗ ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.