ADVERTISEMENT

ಕಾರ್ಗತ್ತಲು ಕಳೆದು ಬೆಳಕು ಮೂಡಿದೆ: ಭೀಮಸೇನ ಹೇಳಿಕೆ

ರಂಗಭೂಮಿ ಚಟುವಟಿಕೆ ಪುನರಾರಂಭ: ಭೀಮಸೇನ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:14 IST
Last Updated 27 ನವೆಂಬರ್ 2020, 16:14 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಪುನರಾರಂಭವಾದ ನಾಟಕ ಪ್ರದರ್ಶನವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ್ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ಪುನರಾರಂಭವಾದ ನಾಟಕ ಪ್ರದರ್ಶನವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ್ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಎಂಟು ತಿಂಗಳ ಕಾಲ ರಂಗಭೂಮಿಗೆ ಕವಿದಿದ್ದ ಕೋವಿಡ್‌ ಕಾರ್ಗತ್ತಲು ಕಳೆದು ಈಗ ಬೆಳಕು ಮೂಡಿದೆ. ಈ ಬೆಳಕು ನಿರಂತರವಾಗಿರಲಿ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ್ ಹೇಳಿದರು.

ದಾವಣಗೆರೆಯ ಕೆಬಿಆರ್‌ ನಾಟಕ ಕಂಪನಿ ಶುಕ್ರವಾರ ಪುನರಾರಂಭಿಸಿದ ನಾಟಕ ಪ್ರದರ್ಶನಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು..

‘ಸರ್ಕಾರ ಕಲಾವಿದರ ಸಂಕಷ್ಟಕ್ಕೆ ನೆರವಾಗಬಹುದೇ ಹೊರತು; ಕಲಾವಿದರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ರಂಗಭೂಮಿಯನ್ನು ಗೌರವಿಸಬೇಕು. ಶತಮಾನೋತ್ಸವ ಹೊಸ್ತಿಲಲ್ಲಿರುವ ಕೆಬಿಆರ್‌ ಕಂಪನಿ ಉತ್ತರೋತ್ತರವಾಗಿ ಬೆಳೆಯಲಿ’ ಎಂದು ಆಶಿಸಿದರು.

ADVERTISEMENT

ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಕೋವಿಡ್‌ನಿಂದಾಗಿ ನಾಟಕ ಕಂಪನಿಗಳು ಸಾಕಷ್ಟು ಸಂಕಷ್ಟ ಅನುಭವಿಸಿವೆ. ಅವರಿಗೆ ಸರ್ಕಾರ ನೆರವಾಗಬೇಕು ಎಂದು ಈ ಹಿಂದೆ ಆಗ್ರಹಿಸಿದ್ದೆ. ಈ ಕುರಿತು ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ರಂಗಭೂಮಿ ಕಲಾವಿದರನ್ನು ಉತ್ತರ ಕರ್ನಾಟಕದ ಜನ ಯಾವತ್ತೂ ಕೈ ಬಿಡುವುದಿಲ್ಲ’ ಎಂದರು.

ಕರ್ನಾಟಕ ವೃತ್ತಿರಂಗ ಶಾಲೆ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾತನಾಡಿ ‘ಕೋವಿಡ್‌ ಕಾಲದಲ್ಲಿ ಹಣವಿಲ್ಲ ಎನ್ನುವ ಕಾರಣಕ್ಕೆ ಕಲಾವಿದರಿಗೆ ಬೇಸರವಾಗಿಲ್ಲ. ನಮ್ಮನ್ನು ನಾವು ಅಭಿವ್ಯಕ್ತಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಬೇಸರವಾಗುತ್ತಿತ್ತು’ ಎಂದರು.

ಶುಕ್ರವಾರ ‘ಗೋವಾದಲ್ಲಿ ಉಳ್ಳಾಗಡ್ಡಿ ಸಾಹುಕಾರ’ ನಾಟಕ ಪ್ರದರ್ಶನಗೊಂಡಿತು. ಕೆಬಿಆರ್ ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಶ್ರೀಕಂಠೇಶ, ಉದ್ಯಮಿ ಸಂಭಾಜಿ ಕಲಾಲ್‌ ಇದ್ದರು. ಕಲಾಲ್‌ ಕಂಪನಿಗೆ ₹5,000 ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.