ADVERTISEMENT

ಕುಂದಗೋಳ: ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಪರದಾಟ!

Pavitra Bhat
Published 14 ಡಿಸೆಂಬರ್ 2023, 4:45 IST
Last Updated 14 ಡಿಸೆಂಬರ್ 2023, 4:45 IST
ಯರಗುಪ್ಪಿ ಅಂಗನವಾಡಿ ಕೇಂದ್ರ–2 ರಲ್ಲಿ ಮಕ್ಕಳು ಪಾಠ ಕೇಳುತ್ತಿರುವ ನೋಟ
ಯರಗುಪ್ಪಿ ಅಂಗನವಾಡಿ ಕೇಂದ್ರ–2 ರಲ್ಲಿ ಮಕ್ಕಳು ಪಾಠ ಕೇಳುತ್ತಿರುವ ನೋಟ   

ಕುಂದಗೋಳ: ಐದು ಜನರು ಮಾತ್ರ ಕುಳಿತುಕೊಳ್ಳಬಹುದಾದ ಜಾಗದಲ್ಲಿ ಒಟ್ಟು 13 ಮಕ್ಕಳಿಗೆ ಈ ಅಂಗನವಾಡಿಯಲ್ಲಿ ಅವಕಾಶ ಮಾಡಲಾಗಿದೆ. ಕಿಷ್ಕಿಂಧೆಯಾದ ಈ ಕಟ್ಟಡದಲ್ಲಿ ಮಕ್ಕಳು ಉತ್ಸಾಹ ಕಳೆದುಕೊಂಡು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಯರಗುಪ್ಪಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 2 ರ ಸ್ಥಿತಿ ಇದು. ಈ ಅಂಗನವಾಡಿ ಕೇಂದ್ರದಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ತುಳಿತು ಪಾಠ ಕೇಳುವ ಸ್ಥಿತಿ ಇದೆ. ಇದು ಕೂಡಾ ಎರಡು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಬಾಂಡ್ ಪ್ರಕಾರ ಈ ಕಟ್ಟಡಕ್ಕೆ ತಿಂಗಳಿಗೆ ₹1,500. ಆದರೆ ಕಟ್ಟಡದ ಮಾಲೀಕರಿಗೆ ತಲುಪುತ್ತಿರುವ ಬಾಡಿಗೆ ₹1000 ಮಾತ್ರ.

ಈ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಫ್ಯಾನ್ ವ್ಯವಸ್ಥೆ ಇಲ್ಲ. ಪ್ರತ್ಯೇಕ ಶೌಚಾಲಯವಂತೂ ಇಲ್ಲವೇ ಇಲ್ಲ. ಅಂಗನವಾಡಿ ಫಲಕ ಹಾಕುವುದಕ್ಕೂ ಜಾಗ ಸಾಕಾಗುತ್ತಿಲ್ಲ. ಅಂಗನವಾಡಿ ಪಕ್ಕದಲ್ಲಿಯೇ ಚಿಕ್ಕ ಕೆರೆ ಕೂಡ ಇದೆ.

ADVERTISEMENT

ಮಕ್ಕಳಿಗೆ ಆಹಾರ, ಕುಡಿಯುವ ನೀರಿನ, ಪಾಠಕ್ಕೆ ಬೇಕಾದ ವಸ್ತುಗಳ, ಸಮಸ್ಯೆಯಿಲ್ಲ. ಶಿಕ್ಷಕಿ, ಸಹಾಯಕಿ ಇಬ್ಬರು ಅಚ್ಚು ಕಟ್ಟಾಗಿ ಕೇಂದ್ರ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತಿದೆ.

ಪ್ರಸ್ತುತ ಬಾಡಿಗೆ ಇರುವ ಕಟ್ಟಡಕ್ಕೆ ಸ್ಥಳಾಂತರ ಆಗುವ ಮೊದಲು ಇದೇ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಅಂಗನವಾಡಿ ಇತ್ತು. ಮಳೆಗಾಲದಲ್ಲಿ ದೇವಸ್ಥಾನದ ಛಾವಣಿ ಸೋರಿಕೆ ಆರಂಭವಾಗಿದ್ದರಿಂದ ಸ್ಥಳ ಬದಲಾಯಿಸಲಾಗಿದೆ.

ಗ್ರಾಮದ ಅಸ್ತಿ ಸಂಖ್ಯೆ 418 ರಲ್ಲಿ ಅಂಗನವಾಡಿ ಕೇಂದ್ರದ ಸ್ವಂತ ಜಾಗ ಇದ್ದರೂ ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ. ಈ ಕಾರಣ ಮಕ್ಕಳು ಅಲೆದಾಡುವುದು ತಪ್ಪುತ್ತಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ.

ಸಮಸ್ಯೆ ಗಮನಕ್ಕೆ ಬಂದಿದ್ದು ಕಟ್ಟಡ ನಿರ್ಮಿಸುವುದಕ್ಕೆ ಸ್ಥಳೀಯವಾಗಿ ವಿಶಾಲ ಜಾಗದ ಸಮಸ್ಯೆ ಇದೆ. ಮೇಲಧಿಕಾರಿಗಳಿಗೆ ಈ ಬಗ್ಗೆ ತಿಳಿಸುತ್ತೇನೆ

–ಕಮಲಾ ಬೈಲೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಂದಗೋಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.