ADVERTISEMENT

ಸಮಯ ಪರಿಪಾಲನೆ: ನೈರುತ್ಯ ರೈಲ್ವೆಗೆ 4ನೇ ಸ್ಥಾನ

ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸಂಜೀವ್ ಕಿಶೋರ್

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 4:21 IST
Last Updated 30 ನವೆಂಬರ್ 2022, 4:21 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ನೈರುತ್ಯ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ 22ನೇ ಸಭೆಯಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಇದ್ದಾರೆ
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ನೈರುತ್ಯ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ 22ನೇ ಸಭೆಯಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಇದ್ದಾರೆ   

ಹುಬ್ಬಳ್ಳಿ: ‘ನೈರುತ್ಯ ರೈಲ್ವೆ ವಲಯದ ರೈಲುಗಳ ಸಮಯಪಾಲನೆಯು ಶೇ 94.10 ಇದ್ದು, ಭಾರತೀಯ ರೈಲ್ವೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.ಹೊಸ ಮಾರ್ಗ, ಜೋಡಿ ಮಾರ್ಗ ಹಾಗೂ ವಿದ್ಯುದೀಕರಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದ್ದು, ವಲಯದ ಶೇ 52ರಷ್ಟು ಜಾಲ ವಿದ್ಯುದೀಕರಣಗೊಂಡಿದೆ’ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ನೈರುತ್ಯ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ 22ನೇ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ವಲಯವು ಹಲವು ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಮೈಸೂರು ಮತ್ತು ಎಂ.ಜಿ.ಆರ್. ಚೆನ್ನೈ ನಡುವೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ’ ಎಂದರು.

‘ಬೆಳಗಾವಿ, ಹೊಸಪೇಟೆ, ದಾವಣಗೆರೆ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ.ಬೆಂಗಳೂರು ದಂಡು ಮತ್ತು ಯಶವಂತಪುರ ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯವನ್ನು ಸಹ ಕೈಗೆತ್ತಿಕೊಳ್ಳಲಾಗುತ್ತಿದೆ.ಜನರ ಅನುಕೂಲಕ್ಕಾಗಿ ಹಬ್ಬಗಳು ಮತ್ತು ರಜಾದಿನಗಳಲ್ಲಿ 83 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಾಗಿದೆ. ಈ ರೈಲುಗಳಿಗೆ 1,798 ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಅಗತ್ಯಕ್ಕೆ ತಕ್ಕಂತೆ ರೈಲುಗಳ ಹೆಚ್ಚುವರಿ ನಿಲುಗಡೆ, ರಸ್ತೆ ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣ, ಪ್ರಯಾಣಿಕ ಸೌಲಭ್ಯಗಳು, ರೈಲು ಸೇವೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಗೋವಾ ರಾಜ್ಯ ಸಚಿವ ನೀಲೇಶ್ ಕಾಬ್ರಾಲ್, ವಾಣಿಜ್ಯೋದ್ಯಮ ಸಂಸ್ಥೆ, ಪ್ರಯಾಣಿಕ ಸಂಘಗಳು, ಗ್ರಾಹಕ ರಕ್ಷಣಾ ಸಂಘಟನೆ, ಅಂಗವಿಕಲರ ಸಂಘಟನೆಗಳು ಹಾಗೂ ರೈಲ್ವೆ ಮಂಡಳಿಯ ವಿಶೇಷ ಪ್ರತಿನಿಧಿತ್ವ ಹೊಂದಿರುವ 30 ಸದಸ್ಯರು ಭಾಗವಹಿಸಿದ್ದರು.ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಇಲಾಖೆಗಳ ಪ್ರಧಾನ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.