ADVERTISEMENT

ಇಂದಿರಾ ಗಾಜಿನ ಮನೆ ಪ್ರವೇಶಕ್ಕೆ ಸಮಯ ನಿಗದಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 17:07 IST
Last Updated 7 ಅಕ್ಟೋಬರ್ 2020, 17:07 IST

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಚುರುಕುಗೊಳಿಸಲು ಮತ್ತು ಅವಘಡಗಳನ್ನು ತಪ್ಪಿಸಲು ಇಂದಿರಾ ಗಾಜಿನಮನೆ ಮತ್ತು ತೋಳನಕೆರೆಗೆ ಸಾರ್ವಜನಿಕರ ಪ್ರವೇಶಕ್ಕೆ ಸಮಯ ನಿಗದಿ ಮಾಡಲಾಗಿದೆ.

ಗಾಜಿನ ಮನೆಯ ಇಂಗುಗುಂಡಿಯಲ್ಲಿ ಇತ್ತೀಚೆಗೆ ಬಾಲಕಿ ಬಿದ್ದು ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮತ್ತು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರ ನಡುವೆ ಸಭೆ ನಡೆದಿತ್ತು.

ಈ ಸಭೆಯಲ್ಲಿ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ‘ಕಾಮಗಾರಿ ಚುರುಕುಗೊಳಿಸಲು ಗಾಜಿನ ಮನೆ ಮತ್ತು ತೋಳನಕೆರೆಗೆ ಸಾರ್ವಜನಿಕರ ಪ್ರವೇಶ ಸಂಪೂರ್ಣ ಬಂದ್‌ ಮಾಡಬೇಕು. ತೋಳನಕೆರೆಯಲ್ಲಿ ನೀರು ತುಂಬಿರುವ ಕಾರಣ ಅಲ್ಲಿಯೂ ಅನೇಕ ಜನ ಬರುತ್ತಾರೆ. ಮತ್ತೊಂದು ಅವಘಡ ನಡೆಯದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ’ ಎಂದು ಕೋರಿದ್ದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣವಾಗಿ ಬಂದ್‌ ಮಾಡುವ ಬದಲು ನಿತ್ಯ ಬೆಳಿಗ್ಗೆ 7 ಗಂಟೆಯಿಂದ 10ರ ವರೆಗೆ ಮತ್ತು ಸಂಜೆ 4 ಗಂಟೆಯಿಂದ 6ರ ತನಕ ವಾಯುವಿಹಾರಕ್ಕೆ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ಬೇರೆ ಅವಧಿಯಲ್ಲಿ ಜನರ ಓಡಾಟ ಕಡಿಮೆಯಾದರೆ ಬಾಕಿ ಉಳಿದ ಕಾಮಗಾರಿ ಮುಗಿಸಲು ವೇಗವಾಗಿ ಸಾಧ್ಯವಾಗಲಿದೆ. ಈ ಕುರಿತು ಒಂದೆರೆಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.