ADVERTISEMENT

ಧಾರವಾಡ | ಎರಡು ವಾರದಲ್ಲಿ ಟಮೆಟೊ ₹40 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 15:16 IST
Last Updated 28 ಜೂನ್ 2020, 15:16 IST
ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿ ಟಮೆಟೊ ವ್ಯಾಪಾರದಲ್ಲಿ ತೊಡಗಿದ್ದ ಭೀಮಣ್ಣ ಬಿನ್ನಿದಿನ್ನಿ
ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿ ಟಮೆಟೊ ವ್ಯಾಪಾರದಲ್ಲಿ ತೊಡಗಿದ್ದ ಭೀಮಣ್ಣ ಬಿನ್ನಿದಿನ್ನಿ   

ಹುಬ್ಬಳ್ಳಿ: ಎರಡು ವಾರಗಳ ಹಿಂದೆಯುಷ್ಟೇ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹20ರಂತೆ ಮಾರಾಟ ಮಾಡುತ್ತಿದ್ದ ಟಮೆಟೊ ಬೆಲೆ ಭಾನುವಾರ ಪ್ರತಿ ಕೆ.ಜಿ.ಗೆ ₹60ಕ್ಕೆ ಹೆಚ್ಚಳವಾಗಿದೆ.

ಸತತ ಮೂರು ವಾರಗಳಿಂದ ಟಮೆಟೊ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಎರಡು ವಾರಗಳ ಹಿಂದೆ ಟಮೆಟೊ ಒಂದು ಕೆ.ಜಿ.ಗೆ ₹20ರಿಂದ 25 ಇತ್ತು. ಕಳೆದ ವಾರ ₹30ರಿಂದ ₹35ಕ್ಕೆ ತಲುಪಿತ್ತು. ಈ ವಾರ ದುಪ್ಪಟ್ಟಾಗಿದೆ. ಸಿದ್ದೇಶ್ವರ ಪಾರ್ಕ್‌, ಜನತಾ ಬಜಾರ್‌ ಮತ್ತು ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿಯೂ ಟಮೆಟೊಗೆ ಇದೇ ಬೆಲೆಯಿತ್ತು.

ನಗರದ ಜನತಾ ಬಜಾರ್‌ನಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಭೀಮಣ್ಣ ಬಿನ್ನಿದಿನ್ನಿ ಅವರನ್ನು ಈ ಕುರಿತು ಪ್ರಶ್ನಿಸಿದಾಗ ‘ಹುಬ್ಬಳ್ಳಿಗೆ ಸಾಮಾನ್ಯವಾಗಿ ಕೊಪ್ಪಳ, ಹಾವೇರಿಯಿಂದ ಟಮೆಟೊ ಬರುತ್ತದೆ. ಎರಡು ವಾರಗಳಿಂದ ಮೇಲಿಂದ ಮೇಲೆ ಮಳೆ ಬಂದ ಕಾರಣ ಸರಕು ಬರುವುದು ಕಡಿಮೆಯಾಗಿ‌ದ್ದರಿಂದ ಬೆಲೆ ಹೆಚ್ಚಳವಾಗಿದೆ’ ಎಂದರು.

ADVERTISEMENT

ಇನ್ನೊಬ್ಬ ವ್ಯಾಪಾರಿ ಬಾಬು ಪ್ರತಿಕ್ರಿಯಿಸಿ ‘ಮಳೆಯ ಹೊಡೆತದಿಂದಲೇ ಬೆಲೆ ಹೆಚ್ಚಳವಾಗಿದೆ. ಬಹಳಷ್ಟು ಕಡೆ ಟಮೆಟೊ ಸಿಗುತ್ತಿಲ್ಲ. 24 ಕೆ.ಜಿ. ಇರುವ ಒಂದು ಬಾಕ್ಸ್‌ಗೆ ₹500ರಿಂದ ₹600 ಕೊಟ್ಟು ತರುತ್ತಿದ್ದೇವೆ’ ಎಂದರು.

ಸಿದ್ಧೇಶ್ವರ ಪಾರ್ಕ್‌ ಸಮೀಪ ವ್ಯಾಪಾರದಲ್ಲಿ ತೊಡಗಿದ್ದ ಹನುಮವ್ವ ಜಂಬಲದಿನ್ನಿ ‘ಒಂದೆಡೆ ಸರಕು ಕಡಿಮೆಯಾಗಿದೆ. ಇನ್ನೊಂದೆಡೆ ದಲ್ಲಾಳಿಗಳ ಕಾಟದಿಂದಲೂ ಬೆಲೆ ಹೆಚ್ಚಳವಾಗಿದೆ. ಇದರಿಂದ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಲಾಭವೇ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.