ಧಾರವಾಡ: ನಗರದ ಎರಡನೇ ವಾರ್ಡ್‌ನಲ್ಲಿ ಹಲವೆಡೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಅಂಗನವಾಡಿ ಕೇಂದ್ರಕ್ಕೆ (ಎತ್ತಿನಗುಡ್ಡ) ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಚರಂಡಿ, ನೀರು ಪೂರೈಕೆ, ಕಸ ವಿಲೇವಾರಿ ಮೊದಲಾದ ಸಮಸ್ಯೆಗಳು ಇವೆ.
ಎತ್ತಿನಗುಡ್ಡ, ಮೆಹಬೂಬ ನಗರ ಸಹಿತ ಹಲವೆಡೆ ಸಿ.ಸಿ ರಸ್ತೆಗಳಾಗಿದ್ದು, ಸಂಚಾರಕ್ಕೆ ಅನುಕೂಲವಾಗಿದೆ. ಇನ್ನು ಹಲವು ರಸ್ತೆಗಳ ಅಭಿವೃದ್ಧಿ ಆಗಬೇಕಿದೆ.
ಈ ವಾರ್ಡ್‌ನಲ್ಲಿ ಕಾರ್ಮಿಕರು ಹೆಚ್ಚು ಇದ್ದಾರೆ. ಕೃಷಿ ವಿಶ್ವವಿದ್ಯಾಲಯ, ಟಾಟಾ ಸಂಸ್ಥೆ ಸಹಿತ ಮೊದಲಾದ ಕಡೆಗಳಿಗೆ ಹಲವು ಕಾರ್ಮಿಕರು ಕೆಲಸ ಮಾಡುತ್ತಾರೆ.
‘ವಾರ್ಡ್‌ನಲ್ಲಿ ಪ್ರಮುಖವಾಗಿ ₹3 ಕೋಟಿ ವೆಚ್ಚದಲ್ಲಿ ಪಾಲಿಕೆಯಿಂದ ಮಾಳಾಪುರ– ಎತ್ತಿನಗುಡ್ಡ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ₹1 ಕೋಟಿ ವೆಚ್ಚದಲ್ಲಿ ಖೂಬಾ ಮಸೀದಿ– ಎತ್ತಿನಗುಡ್ಡ ರಸ್ತೆ ನಿರ್ಮಿಸಲಾಗಿದೆ. ಹಲವು ಸಣ್ಣ ರಸ್ತೆಗಳನ್ನು ನಿರ್ಮಿಸಲಾಗಿದೆ’ ಎಂದು ವಾರ್ಡ್ ಸದಸ್ಯೆ ಸೂರವ್ವ ಬಾಳನಗೌಡ ಪಾಟೀಲ ತಿಳಿಸಿದರು.
‘ಎತ್ತಿನಗುಡ್ಡದಲ್ಲಿ ₹15 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ವಾರ್ಡ್‌ನಲ್ಲಿ ಎಲ್‌ಇಡಿ ಬಲ್ಬ್ ಅಳವಡಿಕೆಗೆ ₹20 ಲಕ್ಷ ಮಂಜೂರಾಗಿದೆ. ಕೆಲವೆಡೆ ಗಟಾರ ನಿರ್ಮಿಸಲಾಗಿದೆ. ಇನ್ನು ಬಹಳಷ್ಟು ಕಡೆ ಗಟಾರ ನಿರ್ಮಿಸಬೇಕಿದೆ. ಅನುದಾನಕ್ಕೆ ಮನವಿ ಸಲ್ಲಿಸಿದ್ದೆವು. ಹಿಂದಿನ ಆಯಕ್ತರು ಅನುಮೋದನೆ ನೀಡಿರಲಿಲ್ಲ’ ಎಂದು ಅವರು ತಿಳಿಸಿದರು.
ಈ ವಾರ್ಡ್‌ನಲ್ಲಿ ಎಂಟು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು ಎಂಬುದು ನಿವಾಸಿಗಳ ಒತ್ತಾಯ.
ಬಹಳಷ್ಟು ಕಡೆ ಚರಂಡಿ ಸಮಸ್ಯೆ ಇದೆ. ಹಲವೆಡೆ ಚರಂಡಿಗಳನ್ನು ನಿರ್ಮಾಣ ಮಾಡಬೇಕಿದೆ. ಕೆಲವೆಡೆ ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ರಭಸವಾಗಿ ಮಳೆ ಸುರಿದಾಗ ನೀರು ರಸ್ತೆಗೆ ಹೊರಳುತ್ತದೆ ಎಂದು ಹೇಳಿದರು.
‘ರಸ್ತೆ, ಬೀದಿದೀಪಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಬೇಕು. ಕೆಲವೆಡೆ ಬೀದಿದೀಪಗಳು ಹಾಳಾಗಿವೆ. ಅವುಗಳನ್ನು ಬದಲಾಯಿಸಬೇಕು. ಗಟಾರ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಬೇಕು’ ಎಂದು ನಿವಾಸಿ ಶ್ರೀನಿವಾಸ ಹುರಿಯನ್ನವರ ಒತ್ತಾಯಿಸುತ್ತಾರೆ.
ಕೆಲವೆಡೆ ಕಸ ರಾಶಿ ಬಿದ್ದಿದೆ. ಜಾನುವಾರುಗಳು, ಹಂದಿಗಳು ರಾಶಿ ಎಳೆದಾಡಿ ರಾಡಿ ಎಬ್ಬಿಸುತ್ತವೆ. ಕಸದ ರಾಶಿ ಸುತ್ತಲಿನ ನಿವಾಸಿಗಳು, ಪಾದಚಾರಿಗಳು ದುರ್ನಾತ ಸಹಿಸಿ ಓಡಾಡಬೇಕಾದ ಅನಿವಾರ್ಯ ಇದೆ.
ಕಾರ್ಮಿಕರ ಕೊರತೆಯಿಂದಾಗಿ ಕಸ ವಿಲೇವಾರಿ ಸಮಸ್ಯೆಯಾಗಿದೆ ಎಂದು ವಾರ್ಡ್ ಸದಸ್ಯೆ ಹೇಳುತ್ತಾರೆ.
ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಎತ್ತಿನಗುಡ್ಡದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಶೀಘ್ರದಲ್ಲಿ ಉದ್ಘಾಟಿಸಲಾಗುವುದು. ವಾರ್ಡ್‌ನಲ್ಲಿ ಉದ್ಯಾನ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಪಾಲಿಕೆಗೆ ಪ್ರಸ್ತಾವ ಸಲ್ಲಿಸಲಾಗುವುದು
-ಸೂರವ್ವ ಪಾಟೀಲ ಪಾಲಿಕೆ ಸದಸ್ಯೆ ಎರಡನೇ ವಾರ್ಡ್
ವಾರ್ಡ್‌ನಲ್ಲಿ ಸಿ.ಸಿ ರಸ್ತೆಗಳನ್ನು ನಿರ್ಮಿಸಿರುವುದು ಒಳ್ಳೆಯದು. ಆದರೆ ಹಂಪ್‌ಗಳು ಜಾಸ್ತಿ ಇವೆ. ವಾರ್ಡ್‌ಗೆ ಬಸ್ ಸೌಕರ್ಯ ಚೆನ್ನಾಗಿದೆ
-ಶಾರುಖ್ ಪಠಾಣ್ ರಿಕ್ಷಾ ಚಾಲಕ ಮೆಹಬೂಬ ನಗರ
ಪ್ರಮುಖ ಬಡಾವಣೆಗಳು ಎತ್ತಿನಗುಡ್ಡ ಕೃಷಿ ವಿಶ್ವವಿದ್ಯಾಲಯ ಮಾಳಾಪುರ ಸೋನಾಪುರ ಹಾಸ್ಮಿನಗರ ಮೆಹಬೂಬ್ ನಗರ ಗುಲಗಂಜಿಕೊಪ್ಪ ಗೌಸಿಯಾ ಟೌನ್ ಬಸವ ಕಲ್ಯಾಣ ನಗರ
ವಾರ್ಡ್ ನಂ.2ಪಾಲಿಕೆ ಸದಸ್ಯೆ: ಸೂರವ್ವ ಬಾಳನಗೌಡ ಪಾಟೀಲಜನಸಂಖ್ಯೆ: 13070ಪುರುಷರು: 6700ಮಹಿಳೆಯರು: 6370ವಾರ್ಡ್ ವಿಸ್ತೀರ್ಣ: 3.40 ಚದರ ಕಿ.ಮೀಸಂಪರ್ಕ ಸಂಖ್ಯೆ: ಮೊ.7338656349ಪಾಲಿಕೆ ಆಸ್ತಿ: 2280ಅಂಗನವಾಡಿ ಕೇಂದ್ರ: 7ಬೀದಿ ದೀಪಗಳು: 508
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.