ADVERTISEMENT

ಹುಬ್ಬಳ್ಳಿ |'ಎನ್‌ಇಪಿ ವಿರೋಧಿ ನಿಲುವು ಕೈಬಿಡಲು ಎಬಿವಿಪಿ ಒತ್ತಾಯ'

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 7:01 IST
Last Updated 18 ಅಕ್ಟೋಬರ್ 2023, 7:01 IST

ಹುಬ್ಬಳ್ಳಿ: ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕೈ ಬಿಟ್ಟಿರುವುದಕ್ಕೆ ನಿರ್ದಿಷ್ಟ ಕಾರಣ ಹೇಳುತ್ತಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಎನ್‌ಇಪಿಯನ್ನು ಪುನರ್‌ ಪರಿಶೀಲಿಸಿ ಅದನ್ನೇ ಮುಂದುವರಿಸಬೇಕು. ರಾಜಕೀಯ ಉದ್ದೇಶಕ್ಕಾಗಿ ಎನ್‌ಇಪಿ ರದ್ದುಪಡಿಸುವುದು ಖಂಡನೀಯ. ರಾಜ್ಯ ಸರ್ಕಾರವು ಎನ್‌ಇಪಿ ವಿರೋಧಿ ನಿಲುವನ್ನು ಕೈಬಿಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಉತ್ತರ ಕರ್ನಾಟಕ ಘಟಕದ ಕಾರ್ಯದರ್ಶಿ ಮಣಿಕಂಠ ಕಳಸ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಇಪಿ ಹಿಂಪಡೆಯುವುದಕ್ಕೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ವಿಷಾದನೀಯ. ಇದೀಗ ಎಸ್‌ಇಪಿ ರಚನೆ ಮಾಡಿ ಅನ್ಯ ರಾಜ್ಯದವರನ್ನು ಅದಕ್ಕೆ ನೇಮಕ ಮಾಡಿರುವ ಕ್ರಮ ಸರಿಯಲ್ಲ. ರಾಜ್ಯದ ಸಂಸ್ಕೃತಿ, ಶೈಕ್ಷಣಿಕ ಅರಿವು ಇದ್ದವರನ್ನು ಅದರಲ್ಲಿ ನೇಮಕ ಮಾಡಿಕೊಳ್ಳಬೇಕಿತ್ತು. ಒಟ್ಟಾರೆ ಶಿಕ್ಷಣ ನೀತಿಯಲ್ಲಿ ರಾಜಕೀಯವನ್ನು ಬೆರೆಸುತ್ತಿರುವ ಸರ್ಕಾರದ ಕ್ರಮ ಸರಿಯಾಗಿಲ್ಲ. ಸಿಬಿಎಸ್‌ಇ ಪಠ್ಯಕ್ರಮ ಕೂಡಾ ಕೇಂದ್ರ ಸರ್ಕಾರ ನಿರ್ಧರಿತ ಪಠ್ಯವಾಗಿದ್ದು, ರಾಜ್ಯ ಸರ್ಕಾರದ ಸಚಿವರು ಹೊಂದಿದ ಶಿಕ್ಷಣ ಸಂಸ್ಥೆಗಳಲ್ಲಿ ಅದನ್ನು ಅಳವಡಿಸಿಕೊಳ್ಳಲಾಗಿದೆ. ಎನ್‌ಇಪಿ ಮಾತ್ರ ವಿರೋಧ ಮಾಡುವುದಕ್ಕೆ ಯಾವುದೇ ಸಮರ್ಥನೆಗಳಿಲ್ಲ ಎಂದು ಹೇಳಿದರು.

ಎನ್‌ಇಪಿ ಸಿದ್ಧಪಡಿಸುವಾಗ ಸಾರ್ವಜನಿಕರಿಂದ ಮತ್ತು ಶಿಕ್ಷಣ ತಜ್ಞರಿಂದ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿತ್ತು. ಎಲ್ಲರೂ ಒಪ್ಪಿದ ಬಳಿಕವೇ ಗುಣಮಟ್ಟದ ಶಿಕ್ಷಣ ಆಧಾರಿತವಾದ ಎನ್‌ಇಪಿಯನ್ನು ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲು ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಕರ್ನಾಟಕ ವಿಶ್ವದ್ಯಾಲಯದಲ್ಲಿ ಮೊದಲು ಎನ್‌ಇಪಿ ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದರು.

ADVERTISEMENT

ರಾಜ್ಯ ಸರ್ಕಾರವು ಎಸ್‌ಇಪಿಯಲ್ಲಿ ನೇಮಕ ಮಾಡಿದವರು ರಾಜಕೀಯವಾಗಿ, ವೈಚಾರಿಕವಾಗಿ ನಿಷ್ಪಕ್ಷಪಾತಿಗಳಲ್ಲ. ಅವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ನೇರವಾಗಿಯೇ ರಾಜಕೀಯ ಪಕ್ಷಗಳ ವಕ್ತಾರಿಕೆಯನ್ನು ಮಾಡಿಕೊಂಡು ಬಂದಿದ್ದಾರೆ ಎಂದರು.

ಪದಾಧಿಕಾರಿಗಳಾದ ಅರುಣ, ಶಿವಾನಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.