ADVERTISEMENT

ಅಮೆರಿಕ ನಿಲುವು: ಭಾರತಕ್ಕಿಲ್ಲ ಹಾನಿ; ಕೃಷ್ಣಗೋಪಾಲ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ; ಸ್ವಯಂಸೇವಕರ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:53 IST
Last Updated 6 ಅಕ್ಟೋಬರ್ 2025, 4:53 IST
Venugopala K.
   Venugopala K.

ಹುಬ್ಬಳ್ಳಿ: ‘ಅಮೆರಿಕದ ನೀತಿ, ನಿಲುವು ಮತ್ತು ನಿರ್ಬಂಧಗಳು ಭಾರತವನ್ನು ಏನೂ ಮಾಡಲಾರವು. ನಮ್ಮದು ಸಮೃದ್ಧ ಹಾಗೂ ಸ್ವಾವಲಂಬಿ ದೇಶ’ ಎಂದು ಆರ್‌ಎಸ್ಎಸ್ ದೆಹಲಿ ಕೇಂದ್ರದ ಸಹ ಸರಕಾರ್ಯವಾಹ ಕೃಷ್ಣಗೋಪಾಲ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಪ್ರಯುಕ್ತ ಸಂಘದ ಹುಬ್ಬಳ್ಳಿ ಮಹಾನಗರ ಘಟಕ ನಗರದ ನೆಹರೂ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನ, ಬಾಂಗ್ಲಾದೇಶ, ಇಸ್ರೇಲ್‌, ಉಕ್ರೇನ್‌ ಸೇರಿದಂತೆ ಅನೇಕ ರಾಷ್ಟ್ರಗಳು ಯುದ್ಧೋನ್ಮಾದದಲ್ಲಿವೆ. ಪರಸ್ಪರ ಸಂಘರ್ಷದಿಂದ ಆಂತರಿಕ ನೆಮ್ಮದಿ ಕಳೆದುಕೊಂಡಿವೆ. ಭಾರತದಲ್ಲಿ ವಿವಿಧ ಧರ್ಮ, ಜಾತಿಯ ಜನಾಂಗದವರಿದ್ದರೂ ಸಂಘರ್ಷವಿಲ್ಲದೆ ಏಕತೆಯಿಂದ ಬದುಕುತ್ತಿದ್ದಾರೆ. ವಿಶ್ವಕ್ಕೆ ಏಕತೆಯ ಸಂದೇಶ ಸಾರುತ್ತಿರುವುದು ನಮ್ಮೆಲ್ಲರ ಹೆಮ್ಮೆ’ ಎಂದರು.

ADVERTISEMENT

‘ಸ್ವಾಭಿಮಾನಿ ಹಿಂದೂ ಸಮಾಜ ನಿರ್ಮಿಸುವ ಜೊತೆಗೆ, ದೇಶವನ್ನು ವಿಕಾಸಗೊಳಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ದೇಶದಾದ್ಯಂತ ಅಭಿಯಾನ ಕೈಗೊಂಡಿದೆ. ಇದಕ್ಕೆ ಮತ್ತಷ್ಟು ವೇಗ ನೀಡಿ ಎಲ್ಲ ಕ್ಷೇತ್ರಗಳನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಮಾದರಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ಹಿಂದೂ ಕೈ ಜೋಡಿಸಬೇಕು’ ಎಂದು ಕರೆ ನೀಡಿದರು.

‘ಸಾವಿರಾರು ವರ್ಷಗಳ ಹಿಂದಿದ್ದ ಭಾರತದ ಗತವೈಭವ ಮರುಸ್ಥಾಪಿಸುವ ಜವಾಬ್ದಾರಿ ಆರ್‌ಎಸ್‌ಎಸ್ ಮೇಲಿದೆ. ಈ ಹಿಂದೆ ನಿರಂತರವಾಗಿ ನಡೆದ ಆಕ್ರಮಣಗಳಿಂದಾಗಿ ಸಮೃದ್ಧವಾಗಿದ್ದ ಭಾರತ, ಬಡ ರಾಷ್ಟ್ರವಾಗಿ ಬದಲಾಗಿತ್ತು. ಆಗ ನಾಗ್ಪುರದಲ್ಲಿ ಒಂದು ಶಾಖೆಯಿಂದ ಆರಂಭವಾದ ಸಂಘ, ಇದೀಗ ದೇಶದಾದ್ಯಂತ 83 ಸಾವಿರ ಶಾಖೆಗಳನ್ನು ಹೊಂದಿದೆ’ ಎಂದರು.

‘ಭಾರತ ಮಾತೆಯನ್ನು ದುಷ್ಟಶಕ್ತಿಯಿಂದ ರಕ್ಷಿಸಬೇಕಿದೆ. ದೇಶದ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಸಮರ್ಪಣ ಭಾವ, ಬದ್ಧತೆ, ಸಮಯ ಪಾಲನೆಯಿಂದ ಹಾಗೂ ನನ್ನ ದೇಶಕ್ಕಾಗಿ ನಾನು ಎನ್ನುವ ಮನಸ್ಥಿತಿಯಿಂದ ಸೇವೆಯಲ್ಲಿ ನಿರತರಾಗಬೇಕು’ ಎಂದು ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಹೇಳಿದರು.

‘ಭಾರತವು ಶಿಕ್ಷಣ, ಕೈಗಾರಿಕೆ, ವಿಜ್ಞಾನ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದರ ಜೊತೆ ಮಹತ್ವಾಕಾಂಕ್ಷೆ ಮತ್ತು ಗೌರವ ಇಟ್ಟುಕೊಂಡು ಸಾಗಬೇಕು. ರಾಷ್ಟ್ರಪ್ರೇಮ, ಏಕತೆಯನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು’ ಎಂದರು.

ಕಾರ್ಯಕ್ರಮಕ್ಕೂ ಮೊದಲು ನಗರದ ವಿವಿಧೆಡೆ ಗಣವೇಷಧಾರಿಗಳಿಂದ ಪಥಸಂಚಲನ ನಡೆಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಂಕರಪಾಟೀಲ ಮುನೇನಕೊಪ್ಪ, ಉದ್ಯಮಿ ವಿಎಸ್‌ವಿ ಪ್ರಸಾದ, ನಂದಕುಮಾರ ಸೇರಿದಂತೆ ಅನೇಕ ಗಣ್ಯರು ಗಣವೇಷಧಾರಿಯಾಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.