ADVERTISEMENT

ಕಳಸಾ-ಬಂಡೂರಿ ಯೋಜನೆ: ಶೀಘ್ರ ಟೆಂಡರ್ ಕರೆಯಿರಿ- ವೀರೇಶ ಸೊಬರದಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 6:24 IST
Last Updated 14 ಫೆಬ್ರುವರಿ 2023, 6:24 IST
 ವೀರೇಶ ಸೊಬರದಮಠ
ವೀರೇಶ ಸೊಬರದಮಠ   

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹದಾಯಿ ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಶೀಘ್ರ ಟೆಂಡರ್ ಕರೆಯಬೇಕು ಎಂದು ರೈತ ಸೇನಾ ಕರ್ನಾಟಕದ ವೀರೇಶ ಸೊಬರದಮಠ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮಂಡಳಿ ಆದೇಶದ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ಆರು ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಬೇಕಿತ್ತು. ಕೇಂದ್ರ, ರಾಜ್ಯದಲ್ಲಿ ಹಾಗೂ ಪಕ್ಕದ ಗೋವಾದಲ್ಲೂ ಬಿಜೆಪಿ ಸರ್ಕಾರವಿದ್ದರೂ, ರಾಜಕೀಯ ಕಾರಣಕ್ಕಾಗಿ ಬೇಕೇಂದೇ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದರು.

ಸದ್ಯದಲ್ಲೇ ಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಾಗಲಿದೆ. ಅಷ್ಟರೊಳಗೆ ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕು. ಕಾಮಗಾರಿಗೆ ಟೆಂಡರ್ ಕರೆದು, ಭೂಮಿಪೂಜೆ ಮಾಡಬೇಕು. ಇಲ್ಲದಿದ್ದರೆ, ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು. ಜೊತೆಗೆ, ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ನ್ಯಾಯಮಂಡಳಿ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಗೋವಾ ಅನಗತ್ಯವಾಗಿ ಮೊಂಡುತನ ಪ್ರದರ್ಶಿಸುತ್ತಿದೆ. ತನ್ನ ಪಾಲಿನ 24 ಟಿಎಂಸಿ ನೀರು ಬಳಕೆಗೆ ಯಾವುದೇ ಯೋಜನೆ ರೂಪಿಸದ ಗೋವಾ, ಅನಗತ್ಯವಾಗಿ ರಾಜ್ಯದ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ಖರೀದಿ ಕೇಂದ್ರಕ್ಕೆ ಆಗ್ರಹ: ಕಡಲೆ ಬೆಳೆ‌ ಕಟಾವು ಆರಂಭವಾಗಿದ್ದು, ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಬಾರಿಯೂ ರೈತರ ಪ್ರತಿಭಟನೆ ಮತ್ತು ಹೋರಾಟದ ಬಳಿಕವೇ ಕೇಂದ್ರ ತೆರೆಯುವುದು ಸಾಮಾನ್ಯವಾಗಿದೆ. ವಿಳಂಬದಿಂದಾಗಿ ರೈತರು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ಇದರ, ಬದಲಿಗೆ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯ ತೋಳನಕೆರೆ, ಉಣಕಲ್ಲ‌ ಕೆರೆ, ಧಾರವಾಡದ ಸಾಧನಕೇರಿ ಹಾಗೂ ಕೆಲಗೇರಿಯ ಒತ್ತುವರಿ ತೆರವಿಗೆ ಹೈಕೋರ್ಟ್ ಗೆ ಪಿಐಎಲ್‌ ಸಲ್ಲಿಸಿದ್ದು, ಸರ್ವೇ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ ಎಂದು ತಿಳಿಸಿದರು.

ಹಿಂದೆ ಜೆಡಿಎಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಎಚ್.ಡಿ. ಕುಮಾರಸ್ವಾಮಿ ಅವರು ಆಹ್ವಾನ ‌ನೀಡಿದ್ದರು. ಆದರೆ, ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆರೋಗ್ಯದ ಸ್ಥಿತಿ ಕೂಡ ಸರಿ ಇಲ್ಲ. ಹೋರಾಟದಲ್ಲೇ ನನಗೆ ತೃಪ್ತಿ. ಸೇನಾ ಕಾರ್ಯಕರ್ತರಿಂದ ಹೆಚ್ಚಿನ ಒತ್ತಡ ಬಂದರೆ, ಎಲ್ಲರ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸೇನಾದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಆಲೇಕರ, ವಕ್ತಾರ ಗುರು ರಾಯನಗೌಡ್ರ, ಸಂಚಾಲಕ ಮುತ್ತು ಪಾಟೀಲ, ಗದಗ ಜಿಲ್ಲಾ ಸಂಚಾಲಕ ಮಂಜಯ್ಯ ಅರವಟಗಿಮಠ, ಬಸವರಾಜ ಗುಡಿ ಹಾಗೂ ಮಹೇಶ ನಾವಳ್ಳಿ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.