ADVERTISEMENT

ವೆಂಟಿಲೇಟರ್‌ ನಿರ್ವಹಣೆ ಸವಾಲಿನ ಕಲೆ: ಅರವಳಿಕೆ ತಜ್ಞರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2021, 12:45 IST
Last Updated 25 ಮೇ 2021, 12:45 IST
ಕೋವಿಡ್‌ ರೋಗಿಗಳಿಗೆ ವೆಂಟಿಲೇಟರ್‌; ನಿರ್ವಹಣೆ ಪ್ರಾಯೋಗಿಕ ಸಲಹೆಗಳು ಕುರಿತು ಮಂಗಳವಾರ ನಡೆದ ವೆಬಿನಾರ್‌ನಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹಾಗೂ ವೈದ್ಯರು ಪಾಲ್ಗೊಂಡಿದ್ದರು
ಕೋವಿಡ್‌ ರೋಗಿಗಳಿಗೆ ವೆಂಟಿಲೇಟರ್‌; ನಿರ್ವಹಣೆ ಪ್ರಾಯೋಗಿಕ ಸಲಹೆಗಳು ಕುರಿತು ಮಂಗಳವಾರ ನಡೆದ ವೆಬಿನಾರ್‌ನಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹಾಗೂ ವೈದ್ಯರು ಪಾಲ್ಗೊಂಡಿದ್ದರು   

ಹುಬ್ಬಳ್ಳಿ: ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ದಿನಗಳಲ್ಲಿ ಸೋಂಕಿತರಿಗೆ ವೆಂಟಿಲೇಟರ್‌ ಬಳಕೆ ಕಲೆಯಾಗಿ ಬದಲಾಗಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ ಹೆಚ್ಚು ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕಿದೆ ಎನ್ನುವ ಅಭಿಪ್ರಾಯ ವಿವಿಧ ವೈದ್ಯರಿಂದ ವ್ಯಕ್ತವಾಯಿತು.

ಕಿಮ್ಸ್‌, ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಂಘ ಹಾಗೂ ಭಾರತ ಅರಿವಳಿಕೆ ತಜ್ಞರ ಸೊಸೈಟಿ (ಐಎಸ್‌ಎ) ಹುಬ್ಬಳ್ಳಿ ಶಾಖೆಯ ಸಹಯೋಗದಲ್ಲಿ ಮಂಗಳವಾರ ‘ಕೋವಿಡ್‌ ರೋಗಿಗಳಿಗೆ ವೆಂಟಿಲೇಟರ್‌; ನಿರ್ವಹಣೆ ಪ್ರಾಯೋಗಿಕ ಸಲಹೆಗಳು’ ವಿಷಯದ ಕುರಿತು ನಡೆದ ವೆಬಿನಾರ್‌ನಲ್ಲಿ ಅ ಅಭಿಪ್ರಾಯ ಕೇಳಿಬಂತು.

ಅರವಳಿಕೆ ತಜ್ಞ ಡಾ. ರಾಜೇಶ ಪಾಟ್ಕೆ ಮಾತನಾಡಿ ‘ಅನೇಕ ಕಡೆ ವೆಂಟಿಲೇಟರ್‌ ಸೌಲಭ್ಯಗಳಿದ್ದರೂ ಅವುಗಳ ಬಳಕೆ ಗೊತ್ತಿಲ್ಲ. ರೋಗಿಯ ಮೇಲಿನ ಆಕ್ಸಿಜನ್‌ ಒತ್ತಡ ಕಡಿಮೆ ಮಾಡಲು ಈ ಯಂತ್ರ ಅನುಕೂಲವಾಗುತ್ತದೆ’ ಎಂದರು.

ADVERTISEMENT

ಕಿಮ್ಸ್‌ ಆಸ್ಪತ್ರೆಯ ಅರವಳಿಕೆ ವಿಭಾಗದ ಪ್ರಾಧ್ಯಾಪಕ ಡಾ. ಬಸವರಾಜ ಕಲ್ಲಾಫುರ ಮಾತನಾಡಿ ‘ಯಾವ ವ್ಯಕ್ತಿಗೆ ಸ್ವಂತ ಶಕ್ತಿಯಿಂದ ಉಸಿರಾಡಲು ಸಾಧ್ಯವಾಗುವುದಿಲ್ಲವೊ; ಅಂಥವರಿಗೆ ವೆಂಟಿಲೇಟರ್‌ಗೆ ಅಗತ್ಯವಾಗಿ ಬೇಕಾಗುತ್ತದೆ. ಶ್ವಾಸಕೋಶದಲ್ಲಿ ಸೋಂಕು ಇದ್ದಾಗ, ದೊಡ್ಡ ಪ್ರಮಾಣದಲ್ಲಿ ಶಸ್ತ್ರಚಿಕಿತ್ಸೆ, ತಲೆಗೆ ಪೆಟ್ಟು ಬಿದ್ದಂತ ಗಂಭೀರ ಸಮಸ್ಯೆಗಳು ಎದುರಿಸುತ್ತಿದ್ದಾರೆ ಈ ಯಂತ್ರದ ಅಗತ್ಯತೆ ಹೆಚ್ಚಿರುತ್ತದೆ’ ಎಂದರು.

‘ರೋಗಿಗೆ ಆಮ್ಲಜನಕ ನೀಡಲು ಬೈಪ್ಯಾಪ್‌ ಹಾಗೂ ಸಿಪ್ಯಾಪ್‌ ಎಂದು ಎರಡು ರೀತಿಯ ವಿಧಾನಗಳು ಇರುತ್ತವೆ. ರೋಗಿಯ ಆರೋಗ್ಯ ಸ್ಥಿತಿ ಆಧಾರದ ಮೇಲೆ ಇವುಗಳನ್ನು ಬಳಸಲಾಗುತ್ತದೆ’ ಎಂದರು.

ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಇಮ್ರಾನ್‌ ಎಸ್. ಮಾತನಾಡಿ ‘ಕೋವಿಡ್‌ ರೋಗಿಗಳಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡುವಾಗ ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಯಂತ್ರ ಸಂಪೂರ್ಣವಾಗಿ ಸರಿಯಾಗಿ ಕೆಲಸ ಮಾಡುತ್ತದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಆಮ್ಲಜನಕ ಹಾಗೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಆಮ್ಲಜನಕ ಸೋರಿಕೆ ಬಗ್ಗೆಯೂ ಗಮನ ಹರಿಸಬೇಕು’ ಎಂದು ಹೇಳಿದರು.

ವೆಬಿನಾರ್‌ನ ಚೇರ್ಮನ್‌ ಡಾ. ಜಿ.ಬಿ ಸುತ್ತೂರ, ಸಂಯೋಜಕ ಡಾ. ನಾಗರಾಜ ಟಂಕಸಾಲಿ, ಐಎಸ್‌ಎ ಅಧ್ಯಕ್ಷ ಡಾ. ಸಮೀರ್‌ ದೇಸಾಯಿ ಹಾಗೂ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಇದ್ದರು.

ತರಬೇತಿ ಹೆಚ್ಚಿಸಲು ಶೆಟ್ಟರ್‌ ಸಲಹೆ
ವೆಂಟಿಲೇಟರ್‌ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಅನುಭವಿಗಳಿಗೆ ಹೆಚ್ಚು ಬೇಡಿಕೆಯಿದೆ. ಆದ್ದರಿಂದ ನಿರ್ವಹಣೆಯ ತರಬೇತಿಯನ್ನು ಹೆಚ್ಚಿಸಬೇಕು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ವೆಬಿನಾರ್‌ನಲ್ಲಿ ಮಾತನಾಡಿದ ಅವರು ‘ಗ್ರಾಮೀಣ ಪ್ರದೇಶದಲ್ಲಿ ವೆಂಟಿಲೇಟರ್‌ ಯಂತ್ರಗಳನ್ನು ಬಳಸುವ ತಜ್ಞರ ಕೊರತೆ ಕಾಡುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ಇದರಿಂದ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನುಕೂಲವಾಗುತ್ತದೆ’ ಎಂದರು.

‘ಎರಡನೇ ಅಲೆಯ ಈಗಿನ ಸಮಯದಲ್ಲಿ ಆಮ್ಲಜನಕ ಹಾಗೂ ವೆಂಟಿಲೇಟರ್ ಬೆಡ್‌ಗಳಿಗೆ ನಿತ್ಯ ಬೇಡಿಕೆ ಹೆಚ್ಚಾಗುತ್ತಿದೆ. ಅನುಭವಿ ವೈದ್ಯರು ಹೊಸಬರಿಗೆ ತರಬೇತಿ ನೀಡಿದರೆ ಈಗಿನ ಸಂಕಷ್ಟದ ಪರಿಸ್ಥಿತಿಯಿಂದ ಪಾರಾಗಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.