ADVERTISEMENT

ಸತ್ಯ ಮರೆತಿರುವುದೇ ಹಿಂಸೆಗೆ ಕಾರಣ: ಸಚಿವ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 9:50 IST
Last Updated 26 ಡಿಸೆಂಬರ್ 2019, 9:50 IST
ಹುಬ್ಬಳ್ಳಿ ಜೈನ ಬೋರ್ಡಿಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್‌ ಶಾಂತಿಸಾಗರ ವಿದ್ಯಾರ್ಥಿ ನಿಲಯದ ನೀಲನಕ್ಷೆ ಅನಾವರಣಗೊಳಿಸಿದರು. ಶಾಸಕ ಎಚ್‌.ಕೆ. ಪಾಟೀಲ ಇದ್ದಾರೆ
ಹುಬ್ಬಳ್ಳಿ ಜೈನ ಬೋರ್ಡಿಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್‌ ಶಾಂತಿಸಾಗರ ವಿದ್ಯಾರ್ಥಿ ನಿಲಯದ ನೀಲನಕ್ಷೆ ಅನಾವರಣಗೊಳಿಸಿದರು. ಶಾಸಕ ಎಚ್‌.ಕೆ. ಪಾಟೀಲ ಇದ್ದಾರೆ   

ಹುಬ್ಬಳ್ಳಿ: ‘ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ, ದ್ವೇಷ, ಅಸೂಯೆಗಳಿಗೆ ಸತ್ಯ, ಅಹಿಂಸೆಯ ಮಾರ್ಗ ಮರೆತಿರುವುದೇ ಕಾರಣವಾಗಿದೆ’ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ಸ್ಟೇಷನ್‌ ರಸ್ತೆಯ ದಿಗಂಬರ್ ಜೈನ ಬೋರ್ಡಿಂಗ್‌ನಲ್ಲಿ ಬುಧವಾರ ಚಾರಿತ್ರ ಚಕ್ರವರ್ತಿ ಪ್ರಥಮಾಚಾರ್ಯ 108 ಶಾಂತಿಸಾಗರ ಮಹಾರಾಜರ ಮೂರ್ತಿ ಅನಾವರಣ ಮಾಡಿ ಅವರು ಮಾತನಾಡಿದರು.

‘ಪ್ರಾಚೀನ ಧರ್ಮವಾಗಿರುವ ಜೈನ ಧರ್ಮ ಜಗತ್ತಿಗೆ ಸತ್ಯ ಮತ್ತು ಅಹಿಂಸೆಯ ಸಂದೇಶ ಸಾರುತ್ತ ಬಂದಿದೆ. ತಂತ್ರಜ್ಞಾನದ ಇಂದಿನ ಯುಗದಲ್ಲಿ ಸತ್ಯದ ಹಾದಿ, ಧಾರ್ಮಿಕ ನಂಬಿಕೆಗಳು ಇರಲೇಬೇಕು. ಅವು ಕ್ಷೀಣಿಸಿದ ಪರಿಣಾಮ ಜಗತ್ತಿನಾದ್ಯಂತ ಹಿಂಸೆ ತಾಂಡವವಾಡುತ್ತಿವೆ’ ಎಂದರು.

ADVERTISEMENT

‘ಸಾಮಾಜಿಕ ಜಾಲತಾಣ, ಟಿವಿಗಳಲ್ಲಿ ಹಿಂಸೆಯನ್ನು ಪ್ರಚೋದಿಸುವ ಕಾರ್ಯಕ್ರಮಗಳೇ ಹೆಚ್ಚು ಬಿತ್ತರವಾಗುತ್ತಿವೆ. ಅಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವುದರಿಂದ ಮನಸ್ಸು ಸಹಜವಾಗಿಯೇ ಹಿಂಸಾತ್ಮಕ ಮಾರ್ಗದಲ್ಲಿ ಸಾಗುತ್ತವೆ. ಅದಕ್ಕೆ ಪ್ರಾಮುಖ್ಯತೆ ನೀಡದೆ, ಧಾರ್ಮಿಕ ಚಿಂತನೆಯಲ್ಲಿ ಕಾಲ ಕಳೆಯಬೇಕು’ ಎಂದರು.

ಶಾಸಕ ಎಚ್‌.ಕೆ. ಪಾಟೀಲ ಮಾತನಾಡಿ, ‘ದೇಶದಲ್ಲಿ ದಿಗಂಬರ ಜೈನ ಪರಂಪರೆ ಅಂತ್ಯವಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಶಾಂತಿಸಾಗರ ಮಹಾರಾಜರು, ಸತ್ಸಂಗ ಸಂಪ್ರದಾಯಗಳ ಆಚರಣೆಯಿಂದ ಮತ್ತೆ ಪುನರುಜ್ಜೀವನಗೊಳಿಸಿದರು. ಅವರ ತತ್ವ, ಆದರ್ಶಗಳು ಮನುಕುಲಕ್ಕೆ ಪ್ರೇರಣೆಯಾಗಿದೆ’ ಎಂದರು.

‘ಸರ್ಕಾರ ಅಲ್ಪಸಂಖ್ಯಾತರಿಗೆ ನೀಡುವ ಅನುದಾನದಲ್ಲಿ ಜೈನ ಸಮುದಾಯಕ್ಕೂ ನೀಡಬೇಕು. ಯಾರಿಂದಲೂ ಸಹಾಯ ಹಸ್ತ ಚಾಚದಿರುವ ಅವರು, ತಮ್ಮಲ್ಲಿರುವುದನ್ನೇ ಮತ್ತೊಬ್ಬರಿಗೆ ದಾನವಾಗಿ ನೀಡುತ್ತಾರೆ. ಮುಂದಿನ ಬಜೆಟ್‌ನಲ್ಲಿ ಸರ್ಕಾರ ಜೈನ ಸಮುದಾಯಕ್ಕೆ ₹100 ಕೋಟಿ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಶಾಂತಿಸಾಗರ ವಿದ್ಯಾರ್ಥಿ ನಿಲಯ, ಪ್ರಭಾವತಿ, ಸುರೇಂದ್ರ ನಾವಳ್ಳಿ ಅಕಾಡೆಮಿ ಸ್ಥಾಪನೆಗೆ ಧನ ಸಹಾಯ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು, ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷ ರಾವ್‌ಸಾಹೇಬ್‌ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದತ್ತಾ ಡೋರ್ಲೆ, ಅಜಿತ್ ಪಾಟೀಲ, ಸಂಜಯ ಸೇಟೆ, ಎ.ಎ. ಮೂಡಲಗಿ, ಬಾಲಚಂದ್ರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.